ರಾಜಕೀಯ

ಆರ್.ಆರ್.ನಗರದಲ್ಲಿ ಕಡಿಮೆ ಮತದಾನವಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯವೇ ಕಾರಣ: ಡಿ.ಕೆ. ಶಿವಕುಮಾರ್ 

Sumana Upadhyaya

ಬೆಂಗಳೂರು: ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರಗಳ ಉಪ ಚುನಾವಣೆ ಮುಗಿದು ಎರಡು ದಿನಗಳು ಕಳೆದಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿನ್ನೆ ವಿಭಿನ್ನ ಹೇಳಿಕೆ ನೀಡಿರುವುದು ಅಚ್ಚರಿ ತಂದಿದೆ.

ಯಾವುದೇ ಉಪ ಚುನಾವಣೆಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಏನಾಗುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ಉಪ ಚುನಾವಣೆಗೆ ಮುನ್ನ ಏನೇನು ಅಕ್ರಮ ನಡೆದಿದೆ, ಎಲ್ಲೆಲ್ಲಿ ನಡೆದಿದೆ ಎಂಬ ಬಗ್ಗೆ ಈಗಾಗಲೇ ಹಲವು ದೂರುಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದೇವೆ. ಅಧಿಕಾರ ಯಂತ್ರಗಳ ದುರುಪಯೋಗ ಮತ್ತು ಪೊಲೀಸರ ಶಾಮೀಲಿನ ಬಗ್ಗೆ ಚುನಾವಣಾ ಆಯೋಗ ದೂರುಗಳನ್ನು ಸ್ವೀಕರಿಸಿಕೊಂಡಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಶಿರಾ ಮತ್ತು ಆರ್ ಆರ್ ನಗರ ಕ್ಷೇತ್ರಗಳಲ್ಲಿ ಯಾವ ರೀತಿಯಲ್ಲಿ ತಮ್ಮ ಪಕ್ಷ ಮುನ್ನಡೆ ಸಾಧಿಸಬೇಕು, ಗೆಲುವು ಕಾಣಬೇಕೆಂದು ನಿರೀಕ್ಷೆ ಹೊಂದಿದ್ದಿರಿ ಎಂದು ಕೇಳಿದ್ದಕ್ಕೆ, ಮತದಾರರ ಮೇಲೆ ನನಗೆ ನಂಬಿಕೆಯಿದೆ. ಆರಂಭಿಕ ಹಂತದಲ್ಲಿ ವ್ಯತ್ಯಾಸ ಕಂಡುಬಂದರೂ ಕೂಡ ಈ ಚುನಾವಣೆಗಳಲ್ಲಿ ಅಂತಿಮವಾಗಿ ಗೆಲ್ಲುವುದು ಕಾಂಗ್ರೆಸ್, ಎರಡೂ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು ಸಾಕಷ್ಟು ಕೆಲಸ ಮಾಡಿದ್ದಾರೆ, ಬೇರೆ ಪಕ್ಷಗಳ ನಾಯಕರು ಸಹ ತಮಗೆ ಬೆಂಬಲ ನೀಡಿದ್ದಾರೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿವೆ ಎಂಬುದಕ್ಕೆ ಆರ್ ಆರ್ ನಗರ ಕ್ಷೇತ್ರದಲ್ಲಿ ಕಡಿಮೆ ಮತದಾನವಾಗಿರುವುದರಿಂದ ತಿಳಿದುಬರುತ್ತದೆ ಎಂದು ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ. 

SCROLL FOR NEXT