ರಾಜಕೀಯ

ಉಪ ಚುನಾವಣೋತ್ತರ ಸಮೀಕ್ಷೆ: ಆರ್ ಆರ್ ನಗರ, ಶಿರಾದಲ್ಲೂ ಬಿಜೆಪಿ ಗೆಲುವು

Lingaraj Badiger

ಬೆಂಗಳೂರು: ಕೊರೋನಾ ಆತಂಕದ ನಡುವೆಯೂ ನಡೆದ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಶನಿವಾರ ಪ್ರಕಟವಾಗಿದ್ದು, ಆರ್ ಆರ್ ನಗರ ಹಾಗೂ ಶಿರಾದಲ್ಲೂ ಬಿಜೆಪಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಿ ವೋಟರ್ ತಿಳಿಸಿದೆ.

ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರೇ ಮೂರನೇ ಬಾರಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.

ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ ಮುನಿರತ್ನ ಅವರು ಶೇ. 37.8ರಷ್ಟು ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ, ಡಿಕೆ ರವಿ ಅವರ ಪತ್ನಿ ಕುಸುಮಾ ಅವರು ಶೇ. 31.1ರಷ್ಟು ಹಾಗೂ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರು ಶೇ. 14ರಷ್ಟು ಮತ ಪಡೆಯಲಿದ್ದಾರೆ.

ಇನ್ನು ಶಿರಾದಲ್ಲೂ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆಯುವ ಸಾಧ್ಯತೆ ಇದೆ ಎಂದು ಸಿ ವೋಟರ್ ಸಮೀಕ್ಷೆ ತಿಳಿಸಿದೆ. 

ಶಿರಾದಲ್ಲಿ ಬಿಜೆಪಿಯ ರಾಜೇಶ್ ಗೌಡ ಅವರು ಶೇ. 36.6 ರಷ್ಟು ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಅವರು 32.5 ರಷ್ಟು ಹಾಗೂ ಜೆಡಿಎಸ್ ನ ಅಮ್ಮಾಜಮ್ಮ ಅವರು ಶೇ. 17.4 ರಷ್ಟು ಮತ ಪಡೆಯುವ ಸಾಧ್ಯತೆ ಇದೆ ಎಂದು ಸಮಿಕ್ಷೆ ವಿವರಿಸಿದೆ.

ಆರ್ ಆರ್ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3ರಂದು ಉಪ ಚುನಾವಣೆ ನಡೆದಿತ್ತು. ನವೆಂಬರ್ 10 ರಂದು ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.

SCROLL FOR NEXT