ರಾಜಕೀಯ

ವಿಜಯೇಂದ್ರ ವೈಭವೀಕರಣಕ್ಕೆ ನನ್ನ ಅಭ್ಯಂತರವಿಲ್ಲ; ಆದ್ರೆ ಒಬ್ಬರ ಪ್ರಯತ್ನದಿಂದ ಗೆಲುವು ಸಾಧ್ಯವಿಲ್ಲ: ಸಚಿವ ಈಶ್ವರಪ್ಪ

Manjula VN

ಬೆಂಗಳೂರು: ಬಿಜೆಪಿ ಎಂದಿಗೂ ಒಬ್ಬ ವ್ಯಕ್ತಿಯ ಮೇಲೆ ಚುನಾವಣೆ ಮಾಡುವುದಿಲ್ಲ. ಸಂಘಟಿತ ಪ್ರಯತ್ನದಿಂದ ಚುನಾವಣೆ ಮಾಡಿ ಗೆಲುವು ಸಾಧಿಸುತ್ತಿದ್ದೇವೆ. ಆದರೆ, ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ವೈಭವೀಕರಿಸುವ ಕೆಲಸಗಳನ್ನು ಕೆಲವರು ಮಾಡುತ್ತಿದ್ದಾರೆಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ಶಿವಮೊಗ್ಗದಲ್ಲಿ ಮಾತನಾಡಿರುವ ಅವರು, ಚುನಾವಣೆ ಸಂದರ್ಭದಲ್ಲಿ ಪ್ರತಿ ಕ್ಷೇತ್ರಕ್ಕೂ 4-5 ಮಂದಿ ಉಸ್ತುವಾರಿಯಾಗಿ ನಮ್ಮ ನಾಯಕರು ನೇಮಿಸುತ್ತಾರೆ. ಅದೇ ಮಾದರಿಯಲ್ಲಿಯೇ ಶಿರಾ ಹಾಗೂ ರಾಜರಾಜೇಶ್ವರಿ ನಗರಕ್ಕೂ ಉಸ್ತುವಾರಿ ನೇಮಿಸಲಾಗಿತ್ತು. ಶಿರಾದಲ್ಲಿ ಕೆಲಸ ಮಾಡಿದಂತೆಯೇ ರಾಜರಾಜೇಶ್ವರಿ ನಗರದಲ್ಲಿ ಸಚಿವ ಅಶೋಕ್ ಅವರು ಕೆಲಸ ಮಾಡಿದ್ದಾರೆ. ಚುನಾವಣೆ ಗೆಲುವಿನಲ್ಲಿ ವಿಜಯೇಂದ್ರ ಅವರ ಪ್ರಯತ್ನವಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ, ವೈಭವೀಕರಿಸುವ ಕೆಲಸಗಳಾಗುತ್ತಿದೆ. ಆದರೆ, ಇದಕ್ಕೆ ನನ್ನದೇನೂ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ. 

ಆರ್ ಆರ್ ನಗರದಲ್ಲಿ ಸಚಿವ ಅಶೋಕ್, ಅಶ್ವತ್ಥ್ ನಾರಾಯಣ ಎಲ್ಲರೂ ಸಹ ಪ್ರಯತ್ನ ಮಾಡಿದರು. ಪರಿಷತ್​ನಲ್ಲಿ ಸಹ ಅದೇ ಪ್ರಯತ್ನ ಮಾಡಿದೆವು. ಹೀಗಾಗಿ ಎಲ್ಲಾ ಚುನಾವಣೆಯಲ್ಲಿ ಸಹ ನಾವು ಗೆಲುವು ಸಾಧಿಸಿದ್ದೇವೆ. ಇಲ್ಲಿ ವಿಜಯೇಂದ್ರ ಪ್ರಯತ್ನ ಇಲ್ಲ ಅಂತಾ ಹೇಳಲ್ಲ. ಆದರೆ ನೀವು ವೈಭವೀಕರಿಸುತ್ತೀರಿ, ನಾವು ಏನೂ ಮಾಡಕ್ಕಾಗಲ್ಲ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಮರಾಠ ಅಭಿವೃದ್ಧಿ ಪ್ರಾಥಿಕಾರ ರಚನೆಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಈವರೆಗೆ ರಾಜ್ಯದಲ್ಲಿ ಹಲವು ಪ್ರಾಧಿಕಾರಗಳು ರಚನೆಯಾಗಿವೆ. ಸಮುದಾಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ಪ್ರಾಧಿಕಾರ ರಚನೆ ಮಾಡಿದ್ದಾರೆ. ಆದರೆ, ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದು, ನಾಳೆಯ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದಿದ್ದಾರೆ 

SCROLL FOR NEXT