ಬೆಂಗಳೂರು: ಜೆಡಿಎಸ್ ಶಾಸಕ ಬಿ ಸತ್ಯನಾರಾಯಣ ಅವರ ನಿಧನದಿಂದಾಗಿ ನಡೆಯಲಿರುವ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರ ಪತ್ನಿ ಹಾಗೂ ಮಗ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.
ಈ ಹಿಂದೆ ತಾಲೂಕ್ ಪಂಚಾಯತ್ ಅಧ್ಯಕ್ಷರಾಗಿರುವ ಸತ್ಯ ನಾರಾಯಣ್ ಮಗ ಸತ್ಯ ಪ್ರಕಾಶ್ ಅವರ ಬಗ್ಗೆ ಪಕ್ಷ ಒಲವು ಹೊಂದಿತ್ತು. ಆದರೆ, ಈಗ ಸತ್ಯ ನಾರಾಯಣ್ ಅವರ ಪತ್ನಿ ಅಮ್ಮಜಮ್ಮ ಉತ್ತಮ ಅಭ್ಯರ್ಥಿಯಂದು ಪಕ್ಷದ ಹಿರಿಯ ನಾಯಕರು ಚಿಂತಿಸಿರುವುದಾಗಿ ತಿಳಿದುಬಂದಿದೆ.
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ, ಮೈಸೂರು ಜಿಲ್ಲೆಯ ಹುಣಸೂರು ಹಾಗೂ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಗಳನ್ನು ತನ್ನ ಹಿಡಿತ ಕಳೆದುಕೊಂಡಿರುವ ಎಲ್ಲಾ ಉಪ ಚುನಾವಣೆಯಲ್ಲಿ ಹೀನಾಯ ಸೋಲಿನ ಪ್ರದರ್ಶನ ಕಂಡಿರುವ ಜೆಡಿಎಸ್ ಈ ಬಾರಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಸದೃಢ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಉತ್ತಮ ಪ್ರದರ್ಶನ ನೀಡಬಹುದು ಎಂಬುದು ಪಕ್ಷದ ಮುಖಂಡರ ಲೆಕ್ಕಾಚಾರವಾಗಿದೆ.
ಸತ್ಯ ಪ್ರಕಾಶ್ ಕ್ಕಿಂತಲೂ ಅಮ್ಮಜಮ್ಮ ಹೆಚ್ಚಿನ ಮತಗಳನ್ನು ಸೆಳೆಯಬಹುದು ಎಂಬ ಲೆಕ್ಕಾಚಾರದಲ್ಲಿ ಅವರನ್ನೇ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. ಕಳೆದ ಮೂರು ಚುನಾವಣೆಯಲ್ಲೂ ಇಲ್ಲಿ ಬಿಜೆಪಿ 18 ಸಾವಿರಕ್ಕಿಂತ ಕಡಿಮೆ ಮತಗಳನ್ನು ಗಳಿಸಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಬಿಜೆಪಿ ಮೂರನೇ ಸ್ಥಾನಕ್ಕೆ ತಳಲ್ಪಡಲಿದೆ.ಆದರೆ, ಈ ಬಾರಿ ರಾಜ್ಯಸರ್ಕಾರ ಚುನಾವಣೆ ಗೆಲ್ಲಲು ಎಲ್ಲಾ ತಂತ್ರಗಳನ್ನು ಬಳಸಿಕೊಳ್ಳುವ ಸಾಧ್ಯತೆಯಿರುವುದಾಗಿ ಜೆಡಿಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
2010 ರಲ್ಲಿ ನಿಧನರಾದ ಪಕ್ಷದ ಶಾಸಕ ಚಂದ್ರಶೇಖರ್ ಪಾಟೀಲ್ ರೇವೂರ್ ಅವರ ಪತ್ನಿ ಅರುಣಾ ಪಾಟೀಲ್ ರೇವೂರ್ ಅವರನ್ನು ಆಗಿನ ಜೆಡಿಎಸ್ ರಾಜ್ಯ ಅಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರು ಗುಲ್ಬರ್ಗಾ ದಕ್ಷಿಣ ಕ್ಷೇತ್ರದಲ್ಲಿ ನಿಲ್ಲಿಸಿ ಗೆಲ್ಲಿಸದ ಸೂತ್ರವನ್ನು ಈ ಕ್ಷೇತ್ರದಲ್ಲೂ ಬಳಸಲಾಗುವುದು ಎಂದು ಜೆಡಿಎಸ್ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.