ರಾಜಕೀಯ

ವಿಧಾನ ಪರಿಷತ್ ಚುನಾವಣೆ: ಕೈ ಅಭ್ಯರ್ಥಿಗಳು ಅಂತಿಮ, 'ಬಿ' ಫಾರಂ ವಿತರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

Srinivasamurthy VN

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಮೂರು ಅಭ್ಯರ್ಥಿಗಳ ಅಂತಿಮಗೊಳಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ 'ಬಿ' ಫಾರಂ ವಿತರಿಸಿದರು.

ವಿಧಾನ ಪರಿಷತ್ತಿನ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳಿಗೆ ಇದೇ ತಿಂಗಳ 28ರಂದು ನಡೆಯಲಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ 'ಬಿ' ಫಾರಂ ವಿತರಣೆ ಮಾಡಿದರು.

ಈಶಾನ್ಯ ಶಿಕ್ಷರ ಕ್ಷೇತ್ರಕ್ಕೆ ಶರಣಪ್ಪ ಮಟ್ಟೂರು, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಪ್ರವೀಣ್ ಪೀಟರ್ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಆರ್.ಎಮ್.ಕುಬೇರಪ್ಪ ಅವರಿಗೆ `ಬಿ' ಫಾರಂ ವಿತರಣೆ ಮಾಡಲಾಗಿದೆ. ಈಶಾನ್ಯ ಶಿಕ್ಷರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಟ್ಟೂರು ಅವರು ಬಿಜೆಪಿ ಪ್ರಬಲ ಅಭ್ಯರ್ಥಿ ಮಾಜಿ ವಿಧಾನ  ಪರಿಷತ್ ಸದಸ್ಯ ಶಶಿ ಜಿ ನಮೋಶಿ ಅವರನ್ನು ಎದುರಿಸಲಿದ್ದಾರೆ. ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಕುಬೇರಪ್ಪ ಅವರನ್ನು, ಬೆಂಗಳೂರು  ಶಿಕ್ಷಕರ ಕ್ಷೇತ್ರಕ್ಕೆ ಪ್ರವೀಣ್ ಪೀಟರ್ ಅವರನ್ನು ಆಯ್ಕೆ ಮಾಡಲಾಗಿದೆ. ಆಗ್ನೇಯ ಪದವೀಧರರ ಸ್ಥಾನಕ್ಕೆ ಪಕ್ಷವು ಇನ್ನೂ ಅಭ್ಯರ್ಥಿಯನ್ನು ಹೆಸರಿಸಿಲ್ಲ.

ಇನ್ನು ನಾಲ್ಕು ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಅ.8ಕ್ಕೆ ಕೊನೆಯ ದಿನವಾಗಿದ್ದು, ಅ.9ಕ್ಕೆ ಉಮೇದುವಾರಿಕೆ ಪರಿಶೀಲನೆ ನಡೆಯಲಿದ್ದು, ಅ.12ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಅ.28ರ ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಆ ಹಿನ್ನೆಲೆಯಲ್ಲಿ `ಬಿ' ಫಾರಂ ಪಡೆದ  ಅಭ್ಯರ್ಥಿಗಳು ನಾಳೆ(ಅ.5) ಅಥವಾ ನಾಡಿದ್ದು ಉಮೇದುವಾರಿಕೆ ಸಲ್ಲಿಸುವ ಸಾಧ್ಯತೆಗಳಿವೆ. 

SCROLL FOR NEXT