ರಾಜಕೀಯ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆಗೆ ಶೀಘ್ರದಲ್ಲೇ ರಾಜ್ಯ ಬಿಜೆಪಿ ಶಿಫಾರಸು?

Manjula VN

ಬೆಂಗಳೂರು: ರಾಜ್ಯ ಬಿಜೆಪಿ ನಾಯಕತ್ವ ಕುರಿತು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿ ಪಕ್ಷವನ್ನು ಮುಜುಗರಕ್ಕೀಡಾಗುವಂತೆ ಮಾಡುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ರಾಜ್ಯ ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. 

ಯತ್ನಾಳ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಈಗಾಗಲೇ ನಿರ್ಧಾರ ಕೈಗೊಂಡಿರುವ ಬಿಜೆಪಿ, ಪಕ್ಷದಿಂದ ಉಚ್ಛಾಟನೆ ಮಾಡುವ ಕುರಿತು ನಾಯಕರೊಂದಿಗೆ ಶೀಘ್ರದಲ್ಲೇ ಮಾತುಕತೆ ನಡೆಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ಕುರಿತು ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮೊದಲಿಗೆ ಮಾತುಕತೆ ನಡೆಸುತ್ತೇವೆ. ನಂತರ ಯತ್ನಾಳ್ ಅವರನ್ನು ಕರೆಸಿ ಮಾತುಕತೆ ನಡೆಸಲಿದ್ದೇವೆ ಎಂದು ಸಿಟಿ ರವಿಯವರು ಹೇಳಿದ್ದಾರೆ.

ಸಚಿವ ಸ್ಥಾನ ಹಾಗೂ  ಕ್ಷೇತ್ರದ ಪ್ರತಿನಿಧಿಗಳ ಬಗ್ಗೆ ಉಮೇಶ್ ಕಟ್ಟಿ ಸೇರಿದಂತೆ ಉತ್ತರ ಕರ್ನಾಟಕ ನಾಯಕರಲ್ಲಿ ಭಿನ್ನಮತವನ್ನು ಪರಿಹರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತರ ಕರ್ನಾಟಕಕ್ಕೆ ತೆರಳಿದ್ದರು. ಈ ವೇಳೆ ಯತ್ನಾಳ್ ಅವರು ಯಡಿಯೂರಪ್ಪ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಲು ನಿರಾಕರಿಸಿದ್ದರು. 

ಯತ್ನಾಳ್ ಅವರು ದುರ್ವರ್ತನೆ ವಿರುದ್ಧ ಈಗಾಗಲೇ ಕೆಂಡಾಮಂಡಲಗೊಂಡಿರುವ ಕಟೀಲ್ ಅವರು ಪಕ್ಷದಿಂದ ಉಚ್ಛಾಟನೆ ಮಾಡಲು ಕೇಂದ್ರ ಶಿಸ್ತುಕ್ರಮ ಸಮಿತಿಗೆ ಶೀಘ್ರದಲ್ಲೇ ಶಿಫಾರಸು ಮಾಡಲಿದ್ದಾರೆಂದು ಹೇಳಲಾಗುತ್ತಿದೆ. 

SCROLL FOR NEXT