ರಾಜಕೀಯ

'ಅಂಥಾ ಅನ್ಯಾಯ ನಾವೇನು ಮಾಡಿದ್ವಿ ಮುನಿರತ್ನಾ ಅವರೇ..': ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವೀಟ್!

Srinivasamurthy VN

ಬೆಂಗಳೂರು: ಆರ್ ಆರ್ ನಗರ ಉಪ ಚುನಾವಣೆ ಕಣ ರಂಗೇರಿದ್ದು, ನಾಯಕರ ಟೀಕೆ-ಪ್ರತಿ ಟೀಕೆ ತಾರಕಕ್ಕೇರಿದೆ. ಏತನ್ಮಧ್ಯೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.

ಖ್ಯಾತ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, 'ತನ್ನ ವಿರೋಧಿಗಳನ್ನು ಹೆದರಿಸಿ, ಬೆದರಿಸಿ ತಾನು ಶಾಸಕನಾಗಬಹುದು ಅಂತ ಮುನಿರತ್ನ ಭಾವಿಸಿದ್ದರೆ, ಅವರಂಥ ಮೂರ್ಖ ಬೇರೊಬ್ಬರಿಲ್ಲ. ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿರಬೇಕು, ರಾಜ್ಯದಲ್ಲಿ ಬಿಜೆಪಿ  ಸರ್ಕಾರ ಇದೆ ಎಂಬ ಕಾರಣಕ್ಕೆ ಅವರ ಪರ ಕೆಲಸ ಮಾಡಿದರೆ ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತೆ. ಮುನಿರತ್ನ ಅವರು ಎರಡು ಬಾರಿ ಗೆದ್ದು ಶಾಸಕನಾಗಲು ಕಾರಣ ಕಾಂಗ್ರೆಸ್ ಪಕ್ಷವೇ ಹೊರತು ಅವರ ವೈಯಕ್ತಿಕ ವರ್ಚಸ್ಸಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಆರ್.ಆರ್ ನಗರ ಕ್ಷೇತ್ರದ  ಅಭಿವೃದ್ಧಿಗೆ ರೂ.2,000 ಕೋಟಿ ಅನುದಾನ ನೀಡಿದ್ದೆ, ಆದರೂ ನಮಗೆ ದ್ರೋಹ ಮಾಡಿದ್ರಲ ಮುನಿರತ್ನ ಅವರೇ, ಅಂಥಾ ಅನ್ಯಾಯ ನಾವೇನು ಮಾಡಿದ್ವಿ ನಿಮ್ಗೆ? ಎಂದು ಕಿಡಿಕಾರಿದ್ದಾರೆ.

ಅಂತೆಯೇ ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ತನ್ನ ತಾಯಿ ಅಂತ ಹೇಳ್ತಿದ್ದ ಮುನಿರತ್ನ ಅದೇ ತಾಯಿಗೆ ದ್ರೋಹ ಬಗೆದು ಬಿಜೆಪಿ ಸೇರಿದ್ರು. ನಾವು ಯಾಕಪ್ಪಾ ಪಕ್ಷನ ತಾಯಿ ಅಂತ ಕರೀತಿದ್ದಿ, ಈಗ ಅದೇ ತಾಯಿಗೆ ಮೋಸ ಮಾಡಿದ್ಯಲ ಅಂದ್ರೆ ಕಾಂಗ್ರೆಸ್ ನಾಯಕರು ನನ್ನ ತಾಯಿಗೆ ಅವಮಾನ ಮಾಡ್ತಿದಾರೆಂದು  ಗೊಳೋ ಅಂತ ಮೊಸಳೆ ಕಣ್ಣೀರು ಸುರಿಸ್ತಾರೆ. ರಾಜ್ಯ ಸರ್ಕಾರ ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಕಡಿತ ಮಾಡಿದೆ, ಅದರ ಜೊತೆಗೆ ವಿತರಣೆ ಆಗುತ್ತಿರುವ ಆಹಾರ ಪದಾರ್ಥಗಳು ಕಲಬೆರಕೆ ಬೇರೆ. ನಾನು ಶಿರಾಕ್ಕೆ ಹೋದಾಗ ಸರ್ಕಾರ ಕೊಡ್ತಿರುವ ರಾಗಿನ ಕೋಳಿ ಸಹಾ ತಿನ್ನಲ್ಲ ಅಷ್ಟು ಕಲ್ಲು, ಕಡ್ಡಿಗಳಿವೆ ಅಂತ ಜನ  ಹಿಡಿಹಿಡಿ ಶಾಪ ಹಾಕ್ತಿದ್ರು. ನಾಚಿಕೆಯಾಗ್ಬೇಕು ಈ ಸರ್ಕಾರಕ್ಕೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

SCROLL FOR NEXT