ರಾಜಕೀಯ

ಸಚಿವ ನಾರಾಯಣ ಗೌಡ- ಶಾಸಕ ಬೆಳ್ಳಿ ಪ್ರಕಾಶ್ ನಡುವೆ ವಿಧಾನಸೌಧದಲ್ಲೇ ಜಟಾಪಟಿ, ಜಗಳ ಬಿಡಿಸಿದ ಇತರ ಶಾಸಕರು

Lingaraj Badiger

ಬೆಂಗಳೂರು: ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣ ಗೌಡ ಮತ್ತು ಕಡೂರು ಶಾಸಕ ಬೆಳ್ಳಿ ಪ್ರಕಾಶ್ ನಡುವೆ ವಿಧಾನಸಭೆ ಮೊಗಸಾಲೆಯಲ್ಲಿ ಸೋಮವಾರ ಮಧ್ಯಾಹ್ನ ಜಟಾಪಟಿ ನಡೆದಿದೆ.

ಈ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರಾದ ಕೆ.ಎಸ್. ಈಶ್ವರಪ್ಪ, ವಿ.ಸೋಮಣ್ಣ, ಜೆಡಿಎಸ್ ಶಾಸಕ ಅನ್ನದಾನಿ ಸೇರಿದಂತೆ ಹಲವರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ.

ಅನುದಾನ ಬಿಡುಗಡೆಗೆ ಸಂಬಂಧಿಸಿ ಜಟಾಪಟಿ ನಡೆದಿದೆ. ಮಧ್ಯಾಹ್ನ 12:40ರ ಸುಮಾರಿಗೆ ಸಚಿವ ನಾರಾಯಣ ಗೌಡ ಉಪಾಹಾರ ಗೃಹದತ್ತ ಬರುತ್ತಿದ್ದರು. ಆಗ ಎದುರಾದ ಶಾಸಕ ಬೆಳ್ಳಿ ಪ್ರಕಾಶ್, ತಮ್ಮ ಕ್ಷೇತ್ರಕ್ಕೆ ತೋಟಗಾರಿಕೆ ಇಲಾಖೆಯಿಂದ ಅನುದಾನ ಬಿಡುಗಡೆ ವಿಳಂಬ ಆಗುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ ಎಂದು ತಿಳಿದುಬಂದಿದೆ.

ಕ್ಷೇತ್ರದ ಕೆಲಸ ಮಾಡದ ನೀನು ಅಸಮರ್ಥ ಮಂತ್ರಿ. ನೀನೇನು ಅಂತಾ ಗೊತ್ತಿದೆ ಎಂದು ಬೆಳ್ಳಿ ಪ್ರಕಾಶ ಮಾತಿನ ಚಕಮಕಿ ಆರಂಭಿಸಿದ್ದಾರೆ. ಈ ವೇಳೆ ಖಾರದಿಂದಲೇ ಉತ್ತರಿಸಿರುವ ಸಚಿವರು ನಿನ್ನ ಸರ್ಟಿಫಿಕೇಟ್ ಯಾವನಿಗೆ ಬೇಕು ಹೋಗೋ ಎಂದಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ನಾರಾಯಣ ಗೌಡ ಅವರು, ಗಲಾಟೆ ಏನಿಲ್ಲ. ಒಂದು ಸಾಮಾನ್ಯ ವರ್ಗಾವಣೆ ಪ್ರಕರಣ. ಅದರ ಬಗ್ಗೆ ಮಾತನಾಡೋಣ ಬನ್ನಿ ಎಂದಿದ್ದೆ. ಅವರು ಸ್ವಲ್ಪ ಏಕವಚನದಲಿ ಮಾತಾಡಿದರು. ಅದಕ್ಕೆ ನನಗೆ ಸ್ವಲ್ಪ ಬೇಜಾರು ಆಯ್ತು. ಅವರು ಇನ್ಮುಂದೆ ಹೀಗೆಲ್ಲಾ ಮಾತಾಡಬಾರದು ಅಷ್ಟೇ‌. ಅವರು ಮಾತಾಡೋದು ರಫ್. ಆ ರೀತಿ ಮಾತಾಡಬಾರದು ಎಂದಿದ್ದಾರೆ.

SCROLL FOR NEXT