ರಾಜಕೀಯ

ಬಿಜೆಪಿ ಸರ್ಕಾರದಿಂದ ರೈತರ ಬೆನ್ನಿಗೆ ಚೂರಿ: ಹೆಚ್ ಡಿ ಕುಮಾರಸ್ವಾಮಿ ಲೇವಡಿ

Vishwanath S

ಬೆಂಗಳೂರು: ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿದ್ದ ರಾಜ್ಯದ ಬಿಜೆಪಿ ಸರಕಾರ, ರೈತರ ಬಗ್ಗೆ ಮೃದು ಮಾತಾಡುತ್ತಾ ರೈತರ ಬೆನ್ನಿಗೆ ಚೂರಿ ಹಾಕುತ್ತಿದೆ ಇದೀಗ ರಸಗೊಬ್ಬರ ದರವನ್ನು ಶೇಕಡ 60ರಷ್ಟು ಹೆಚ್ಚಳ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. 

ಇಂದು ಸರಣಿ ಟ್ವೀಟ್ ಮಾಡಿರುವ ಅವರು, ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರು ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳ ಜತೆ ಸಭೆ ನಡೆಸುವುದರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಬಾರದು. ಬದಲಾಗಿ ಸಚಿವರು ಪ್ರಧಾನಿ ಬಳಿ ಮಾತನಾಡಿ ರಸಗೊಬ್ಬರಕ್ಕಾಗಿ ನೀಡುತ್ತಿದ್ದ 1.5 ಲಕ್ಷ ಕೋಟಿಯಷ್ಟು ಸಬ್ಸಿಡಿ ಮುಂದುವರೆಸುವಂತೆ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. 

ಬಾಯಿ ಮಾತಿನಿಂದ ರೈತರ ಬಾಳು ಬೆಳಗಲು ಸಾಧ್ಯವಿಲ್ಲ. ರೈತರ ಮತಗಳ ಮೇಲೆ ಕಣ್ಣಿಟ್ಟು ಎಷ್ಟು ದಿನ ಸುಳ್ಳಿನ ಅರಮನೆ ಕಟ್ಟುತ್ತೀರಿ? ಇನ್ನಾದರೂ ರೈತರಿಗೆ ಸಹನೀಯ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಡಿ. ರಸಗೊಬ್ಬರದ ಮೇಲಿನ ದರ ಹೆಚ್ಚಳ ವಾಪಸ್ ಪಡೆಯಿರಿ ಎಂದೂ ಅವರು ಆಗ್ರಹಿಸಿದ್ದಾರೆ.

SCROLL FOR NEXT