ರಾಜಕೀಯ

ಸಿ.ಪಿ. ಯೋಗೇಶ್ವರ್ ಮನೆ ಮಾರಿ ಸರ್ಕಾರ ರಚಿಸಿದರೆಂದು ಜಾರಕಿಹೊಳಿ ಹೇಳಿದಾಗ ಈ ಸಂಸ್ಥೆಗಳು ಎಲ್ಲಿದ್ದವು?

Shilpa D

ಬೆಂಗಳೂರು: ಆಪರೇಷನ್ ಕಮಲ, ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಬಿಜೆಪಿ ನಾಯಕರು ಹಣ ಖರ್ಚು ಮಾಡಿದ ಬಗ್ಗೆ ಆರೋಪ ಕೇಳಿ ಬಂದಾಗ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸಂಸ್ಥೆಗಳು ಎಲ್ಲಿದ್ದವು? ಬಿಜೆಪಿಯವರ ವ್ಯವಹಾರಗಳೆಲ್ಲಾ ಸರಿಯಾಗಿದ್ದವಾ?" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಟ್ವೀಟ್ ಮಾಡಿದ್ದು, ಜಮೀರ್ ಹೇಳಿಕೆಗಳು ಮುಗಿದಿರುವಾಗ ಅವರ ನಿವಾಸ ಹಾಗೂ ಆಪ್ತರ ಮನೆಗಳ ಮೇಲೆ ದಾಳಿ ಮಾಡಿ, ಕಿರುಕುಳ ನೀಡುತ್ತಿರುವುದು ಖಂಡನೀಯ. ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಎಸಿಬಿ ನಿಜಕ್ಕೂ ಕಾರ್ಯಪ್ರವೃತ್ತವಾಗಿದ್ದರೆ, ಮಾಜಿ ಸಚಿವ ಶ್ರೀನಿವಾಸಗೌಡರು ವಿಧಾನಸಭೆಯಲ್ಲಿ ಆಪರೇಷನ್ ಕಮಲದ ವಿಚಾರವಾಗಿ ಸಿ.ಪಿ. ಯೋಗೇಶ್ವರ್ ಹಾಗೂ ಅಶ್ವಥ್ ನಾರಾಯಣ ಅವರು 30 ಕೋಟಿ ಹಣದ ಆಮಿಷ ನೀಡಿ, 5
ಕೋಟಿ ಹಣವನ್ನು ನನ್ನ ಮನೆಯಲ್ಲಿ ಇಟ್ಟು ಹೋಗಿದ್ದರು ಎಂದು ಆರೋಪ ಮಾಡಿದಾಗ ಈ ಇಲಾಖೆಗಳು ಎಲ್ಲಿ ಹೋಗಿದ್ದವು?. 

ಸಿ.ಪಿ. ಯೋಗೇಶ್ವರ್ ಮನೆ ಮಾರಿ 9 ಕೋಟಿ ಹಣ ಖರ್ಚು ಮಾಡಿ ಸರ್ಕಾರ ರಚನೆ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಅವರು ಹೇಳಿದಾಗ ಈ ಇಲಾಖೆಗಳು ಏನಾಗಿದ್ದವು?" ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.

ರಮೇಶ್ ಜಾರಕಿಹೊಳಿ ಸಿಪಿ ಯೋಗೇಶ್ವರ್ ಮೇಲೆ ಆರೋಪ ಮಾಡಿದ್ದಾಗ ಅವರ ಮೇನೆ ಮೇಲೆ ದಾಳಿ ಆದವಾ? ಅವರಿಗೆ ಈ ತನಿಖಾ ಸಂಸ್ಥೆಗಳಿಂದ ನೋಟೀಸ್ ಜಾರಿಯಾಯ್ತಾ? ವಿಧಾನಸಭೆಯಲ್ಲೇ ನೀಡಿದ ಹೇಳಿಕೆಗಿಂತ ಬೇರೆ ಸಾಕ್ಷಿ ಏನು ಬೇಕಿತ್ತು? ಇವುಗಳು ಭ್ರಷ್ಟಾಚಾರ, ಹಣ ಅವ್ಯವಹಾರದ ಪ್ರಕರಣಗಳಲ್ಲವೇ? ಯಾಕೆ ಈ ಬಗ್ಗೆ ಪ್ರಕರಣಗಳು ದಾಖಲಾಗಲಿಲ್ಲ. ನಾನು ಅವರ ವೈಯಕ್ತಿಕ ವ್ಯವಹಾರಗಳ ಬಗ್ಗೆ ಮಾತನಾಡುತ್ತಿಲ್ಲ. ಅವರ ಬಾಯಿಂದ ಬಂದ ನುಡಿಮುತ್ತುಗಳನ್ನೇ ಆಧರಿಸಿ ಪ್ರಶ್ನೆ ಮಾಡುತ್ತಿದ್ದೇನೆ." ಎಂದು ಡಿಕೆಶಿ ಹರಿಹಾಯ್ದಿದ್ದಾರೆ.

SCROLL FOR NEXT