ರಾಜಕೀಯ

'ಖಾತೆ ಕ್ಯಾತೆ': ಸಿಎಂ ಬೊಮ್ಮಾಯಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಲು ಆನಂದ್ ಸಿಂಗ್ ಚಿಂತನೆ?

Sumana Upadhyaya

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಿಂದ ಮೊದಲ ವಿಕೆಟ್ ಪತನವಾಗಿದೆಯೇ ಎಂಬ ಗುಸುಗುಸು ವದಂತಿ ಬುಧವಾರ ದಟ್ಟವಾಗಿ ಕೇಳಿಬರುತ್ತಿದೆ.

ನೂತನ ಸಚಿವರಿಗೆ ಖಾತೆ ಹಂಚಿಕೆಯಾದ ಬಳಿಕ ತಮಗೆ ಸಿಕ್ಕಿದ ಖಾತೆ ಬಗ್ಗೆ ಖ್ಯಾತೆ ತೆಗೆದಿದ್ದ ಆನಂದ್ ಸಿಂಗ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ಇಂದು ಮುಖ್ಯಮಂತ್ರಿಗಳು ಮತ್ತು ಮಾಜಿ ಮುಖ್ಯಂತ್ರಿ ಯಡಿಯೂರಪ್ಪನವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆಯೇ ಎಂಬ ಸಂಶಯ ದಟ್ಟವಾಗಿ ಹರಿದಾಡುತ್ತಿದೆ.

ಶಾಸಕರ ಭವನಕ್ಕೆ ಬೀಗ: ಅದಕ್ಕೆ ಪುಷ್ಠೀಕರಣ ನೀಡುವ ಹಲವು ವಿದ್ಯಾಮಾನಗಳು ನಡೆದಿವೆ. ನಿನ್ನೆ ಶಾಸಕರ ಭವನದಿಂದ ಅವರು ತಮ್ಮ ಕಾರ್ಯಾಲಯ ತೆರವುಗೊಳಿಸಿದ್ದಾರೆ, ಅಲ್ಲಿ ಅವರ ನಾಮಫಲಕವು ಮಾಯವಾಗಿದೆ.ಹೊಸಪೇಟೆಯಲ್ಲಿರುವ ಸಚಿವ ಆನಂದ್ ಸಿಂಗ್ ಅವರ ಶಾಸಕರ ಕಚೇರಿಯನ್ನು ಅವರು ತೆರವುಗೊಳಿಸಿದ್ದಾರೆ.

ಆನಂದ್ ಸಿಂಗ್ ಅವರು ಆರಂಭದಲ್ಲಿ ಇಂಧನ ಅಥವಾ ಲೋಕೋಪಯೋಗಿ ಇಲಾಖೆ ಸಚಿವ ಖಾತೆ ಕೇಳಿದ್ದರು, ಆದರೆ ಅವರಿಗೆ ಸಿಕ್ಕಿದ್ದು ಪ್ರವಾಸೋದ್ಯಮ, ಪ್ರವಾಸೋದ್ಯಮ, ಪರಿಸರ ವಿಜ್ಞಾನ ಮತ್ತು ಪರಿಸರ ಖಾತೆ. ತಮಗೆ ಸಿಕ್ಕಿದ ಖಾತೆ ಬಗ್ಗೆ ಬಹಿರಂಗವಾಗಿಯೇ ವಾರದ ಹಿಂದೆ ಆನಂದ್ ಸಿಂಗ್ ಅಸಮಾಧಾನ ತೋಡಿಕೊಂಡಿದ್ದರು, ಅಲ್ಲದೆ ಇನ್ನು ಕೆಲವು ದಿನಗಳಲ್ಲಿಯೇ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದಿದ್ದರು.

ಇದೀಗ ಆನಂದ್ ಸಿಂಗ್ ಅವರು ಹೊಸಪೇಟೆಯ ವೇಣುಗೋಪಾಲಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಕುಟುಂಬಸ್ಥರೊಂದಿಗೆ ಭಾಗಿಯಾಗಿದ್ದು ಇನ್ನು ಕೆಲವೇ ಹೊತ್ತಿನಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ರಾಜಧಾನಿಗೆ ಬಂದ ಮೇಲೆ ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದ್ದಾರೆಯೇ ಎಂಬ ಕುತೂಹಲ ಮನೆಮಾಡಿದೆ.

ಪ್ರತಿಕ್ರಿಯಿಸುವುದಿಲ್ಲ: ಇನ್ನು ಹೊಸಪೇಟೆಯಲ್ಲಿಂದು ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಆನಂದ್ ಸಿಂಗ್ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿಯವರ ತೀರ್ಮಾನವೇ ಅಂತಿಮ ಎಂದಿದ್ದಾರೆ.

ತಮ್ಮ ಪೂರ್ವಜರು ಕಟ್ಟಿಸಿದ ದೇಗುಲದಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾದ ಆನಂದ್ ಸಿಂಗ್ ಇಂದು ತಮ್ಮ ರಾಜಕೀಯ ನಿರ್ಧಾರ ಘೋಷಿಸಲಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ಸಹ ಇಲ್ಲಿಂದಲೇ ಅವರು ರಾಜೀನಾಮೆ ಪ್ರಕಟಿಸಿದ್ದರು. ಎರಡು ವರ್ಷ ಹಿಂದೆ ಅನರ್ಹಗೊಂಡ 17 ಕಾಂಗ್ರೆಸ್-ಜೆಡಿಎಸ್ ಶಾಸಕರಲ್ಲಿ ಆನಂದ್ ಸಿಂಗ್ ಕೂಡ ಒಬ್ಬರಾಗಿದ್ದರು. ನಂತರ ಅದರಲ್ಲಿ 16 ಮಂದಿ ಬಿಜೆಪಿ ಸೇರ್ಪಡೆಯಾಗಿ ಶಾಸಕರಾದರು. ಅವರಲ್ಲಿ ಬಹುತೇಕರು ಇಂದು ಸಚಿವರಾಗಿದ್ದಾರೆ.

ವಿ ಸುನಿಲ್ ಕುಮಾರ್ ಸಂಸ್ಕೃತಿ ಸಚಿವರಾಗಿ ಅಧಿಕಾರ: ಇನ್ನು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ವಿ ಸುನಿಲ್ ಕುಮಾರ್ ಅಧಿಕಾರ ಸ್ವೀಕರಿಸಿಕೊಂಡಿದ್ದು ಅವರು ಇಂಧನ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಳ್ಳದ್ದು ಕುತೂಹಲ ಮೂಡಿಸಿದೆ. ಈ ಬಗ್ಗೆ ಅವರನ್ನು ಕೇಳಿದಾಗ ಆನಂದ್ ಸಿಂಗ್ ಅವರ ಬಗ್ಗೆ ನನಗೆ ಗೊತ್ತಿಲ್ಲ, ಇಂಧನ ಖಾತೆ ಸಚಿವರಾಗಿ ಇನ್ನು ಮೂರು ದಿನಗಳಲ್ಲಿ ಅಧಿಕಾರ ಸ್ವೀಕರಿಸಿಕೊಳ್ಳುತ್ತೇನೆ ಎಂದಿದ್ದಾರೆ. 

SCROLL FOR NEXT