ರಾಜಕೀಯ

ಆನಂದ್ ಸಿಂಗ್ ಬಳಿ ಮಾತನಾಡುತ್ತೇನೆ, ಅಂತಿಮವಾಗಿ ಎಲ್ಲ ಸರಿ ಹೋಗುತ್ತದೆ: ಸಿಎಂ ಬಸವರಾಜ ಬೊಮ್ಮಾಯಿ

Sumana Upadhyaya

ಬೆಂಗಳೂರು: ಸಚಿವ ಆನಂದ್ ಸಿಂಗ್ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ, ಅವರು ತಮ್ಮ ಅಸಮಾಧಾನ, ನೋವನ್ನು ತೋಡಿಕೊಂಡಿದ್ದಾರೆ. ಅವರ ಜೊತೆ ನಾನು ಕೂಡ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ, ಬೆಂಗಳೂರಿಗೆ ಬಂದ ಮೇಲೆ ಮಾತನಾಡಿ ಎಲ್ಲವನ್ನೂ ಬಗೆಹರಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಮೂಲಕ ಸಚಿವ ಆನಂದ್ ಸಿಂಗ್ ಅವರಿಗೆ ತೀವ್ರ ಅಸಮಾಧಾನವಿದೆ, ಆರಂಭದಲ್ಲಿಯೇ ಅವರು ಎತ್ತಿರುವ ಖಾತೆ ಕ್ಯಾತೆ ಮುಂದುವರಿದಿದ್ದು, ಇನ್ನೂ ಬಗೆಹರಿದಿಲ್ಲ ಎಂಬುದನ್ನು ಸಿಎಂ ಬೊಮ್ಮಾಯಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಬೆಂಗಳೂರಿನಲ್ಲಿಂದು ತಮ್ಮ ನಿವಾಸದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆನಂದ್ ಸಿಂಗ್ ಅವರನ್ನು ಕರೆದು ಮಾತನಾಡುತ್ತೇನೆ,ಈಗಾಗಲೇ ಎಲ್ಲಾ ವಿಚಾರಗಳನ್ನು ಅವರು ಹೇಳಿದ್ದಾರೆ. ಅಂತಿಮವಾಗಿ ಎಲ್ಲವೂ ಬಗೆಹರಿಯಲಿದೆ ಎಂದು ಸಮಸ್ಯೆಯನ್ನು ತಾವು ಸರಿಪಡಿಸುವ ವಿಶ್ವಾಸ ಹೊಂದಿದ್ದಾರೆ.

ಆನಂದ್ ಸಿಂಗ್ ನನ್ನ ಗೆಳೆಯ:ಆನಂದ್ ಸಿಂಗ್ ನನಗೆ ಮೂರು ದಶಕಗಳ ಗೆಳೆಯರು, ನಿರಂತರ ಸಂಪರ್ಕದಲ್ಲಿದ್ದೇವೆ, ನಿನ್ನೆ ಮಾತನಾಡಿದ್ದೇನೆ, ಇವತ್ತು ಕೂಡ ಮಾತನಾಡುತ್ತೇನೆ. ವಿಚಾರ ನನಗೆ ಗೊತ್ತಿದೆ, ಇವತ್ತು ಬೆಂಗಳೂರಲ್ಲಿ ಇರುತ್ತೇನೆ. ನಾಳೆ ಇರುವುದಿಲ್ಲ, ನಾಡಿದ್ದು ಇರುತ್ತೇನೆ, ಬಂದು ಮಾತನಾಡುವಂತೆ ಹೇಳಿದ್ದೇನೆ, ಏನೂ ಸಮಸ್ಯೆಯಾಗುವುದಿಲ್ಲ ಎಂದರು.

ರಾಜೀನಾಮೆ ವಿಚಾರ ಚರ್ಚೆಯಾಗಿಲ್ಲ, ನಾವು ಏನು ತೀರ್ಮಾನ ಮಾಡುತ್ತೇವೆ ಎಂಬುದು ಕೊನೆಗೆ ನಿಮಗೆ ಗೊತ್ತಾಗುತ್ತದೆ ಎಂದರು.

ಆನಂದ್ ಸಿಂಗ್ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆಯೇ ಎಂದು ಕೇಳಿದ್ದಕ್ಕೆ, ಇಲ್ಲ ಹಾಗೇನು ಆಗಿಲ್ಲ, ನಾನು ಈಗ ಏನೂ ಹೇಳಲು ಬರುವುದಿಲ್ಲ, ನಾನು-ನೀವು ಆನಂದ್ ಸಿಂಗ್ ಅಲ್ಲವಲ್ಲ, ಸುಮ್ಮನೆ ಊಹಾಪೋಹ ಬೇಡ ಎಂದರು.

ಖಾತೆ ಹಂಚಿಕೆ ಬಗ್ಗೆ ಖ್ಯಾತೆ ತೆಗೆದಿದ್ದ ಮತ್ತೊಬ್ಬ ಸಚಿವ ಎಂಟಿಬಿ ನಾಗರಾಜ್ ಅವರ ಜೊತೆ ಕೂಡ ಮಾತನಾಡಿದ್ದೇನೆ, ಅವರದ್ದೇನು ಸಮಸ್ಯೆಯಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

SCROLL FOR NEXT