ಬೆಂಗಳೂರು: ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳು ಉಳ್ಳವರನ್ನು ಓಲೈಸಿಕೊಂಡು ಬಡವರು, ದೀನ ದಲಿತರ ಹಿತಾಸಕ್ತಿ ಕಡೆಗಣಿಸಿ ಅವರ ಬದುಕನ್ನು ಮೂರಾಬಟ್ಟೆ ಮಾಡುತ್ತಿದೆ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರದ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ, ನೀತಿ ವಿರುದ್ಧ ಪಕ್ಷದ ಕಾರ್ಯಕರ್ತರು ಜನ ಜಾಗೃತಿ ಹೋರಾಟ ರೂಪಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ರಚನಾತ್ಮಕ ಹೋರಾಟದ ಮೂಲಕ ಮನುಷ್ಯ ವಿರೋಧಿ ಬಿಜೆಪಿ ಹುನ್ನಾರಗಳನ್ನು ಬಯಲಿಗೆಳೆದು ಸೋಲಿಸುವುದೆ ಇಂದಿನ ಎಲ್ಲ ಸಮಸ್ಯೆಗಳಿಗೆ ಇರುವ ನಿಜವಾದ ಪರಿಹಾರ. ಹಾಗೆ ಮಾಡಬೇಕೆಂದರೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಿಷಯಗಳನ್ನು ಅಧ್ಯಯನ ಮಾಡಿ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಮನವಿ ಮಾಡಿದ್ದಾರೆ.
ಮೋದಿ ಅಧಿಕಾರಕ್ಕೆ ಬಂದ ಮೇಲೆ ಈಗ ಜನರಿಂದ ಮತ್ತೆ 75 ರೂಪಾಯಿಗಳನ್ನು ಸಂಗ್ರಹಿಸುತ್ತಿದ್ದಾರೆ. ಕಾರ್ಪೊರೇಟ್ ಬಂಡವಾಳಿಗರಿಂದ ಕೇವಲ 25 ರೂಪಾಯಿಗಳನ್ನು ಸಂಗ್ರಹಿಸುತ್ತಿದ್ದಾರೆ. ಇದನ್ನು ನೋಡಿದರೆ ಸಾಕು ಬಿಜೆಪಿಯವರು ಯಾರ ಪರ ಎಂಬುದು ಸುಲಭವಾಗಿ ಅರ್ಥವಾಗಲಿದೆ.
ಬಿಜೆಪಿ ಎಂಬ ಸುಳ್ಳಿನ ಫ್ಯಾಕ್ಟರಿಯು ಉತ್ಪಾದಿಸಿ ಹಂಚುತ್ತಿರುವ ಸುಳ್ಳುಗಳ ಕುರಿತು ಜನರಿಗೆ ಸತ್ಯ ಹೇಳುವುದರ ಜೊತೆಗೆ ಆ ಬಗ್ಗೆ ಅರಿವು ಮೂಡಿಸುವಂತೆ ತಮ್ಮ ಪಕ್ಷದ ಜಿಲ್ಲಾ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರಿಗೆ ತಿಳಿಸಿದ್ದಾರೆ.
“ನಾನು ಬರೆದಿರುವ ‘ಜನಪೀಡಕ ಸರ್ಕಾರ’, ‘ ಐದು ಕಾಯ್ದೆಗಳು- ಅಸಂಖ್ಯಾತ ಸುಳ್ಳುಗಳು’ ಮತ್ತು ‘ಪೆಟ್ರೋಲ್, ಡೀಸೆಲ್ ನೂರು –ಜನರ ಬದುಕು ನುಚ್ಚು ನೂರು’ ಎಂಬ ಕಿರು ಪುಸ್ತಕಗಳನ್ನು ತಮ್ಮ ಓದಿಗಾಗಿ ಕಳಿಸುತ್ತಿದ್ದೇನೆ. ತಾವುಗಳು ಈ ವಿಚಾರಗಳನ್ನು ಓದಿ. ಕಿರು ಪುಸ್ತಕಗಳ ಕೊರತೆಯಾದರೆ ಪಕ್ಷದ ಶಿಷ್ಟಾಚಾರದಂತೆ ಮುದ್ರಿಸಿಕೊಂಡು ಎಲ್ಲ ಬೂತು ಮಟ್ಟದ ಕಾರ್ಯಕರ್ತರೂ ಓದುವಂತೆ ಮಾಡಿ ಜನರನ್ನು ನಿಜದ ಬೆಳಕಿನ ಕಡೆಗೆ ಮುನ್ನಡೆಸಬೇಕೆಂದು ಸಿದ್ದರಾಮಯ್ಯ ಅವರು ಕೋರಿದ್ದಾರೆ.