ರಾಜಕೀಯ

ವಿಧಾನ ಪರಿಷತ್ ಚುನಾವಣೆ ಪ್ರಚಾರ: ಬಿಜೆಪಿಯ 2 ಗುಂಪುಗಳ ನಡುವೆ ಮಾರಾಮಾರಿ

Manjula VN

ಹಾಸನ: ಎಂಎಲ್'ಸಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿಯ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಮಂಗಳವಾರ ನಡೆದಿದೆ.

ವೀರಶೈವ ಕಲ್ಯಾಣ ಮಂಟಪದಲ್ಲಿ ನಿನ್ನೆ ಚುನಾವಣಾ ಪ್ರಚಾರ ಸಭೆ ನಿಗದಿಯಾಗಿತ್ತು. ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್, ಅಭ್ಯರ್ಥಿ ಹೆಚ್.ಎಂ.ವಿಶ್ವನಾಥ್, ಮುಖಂಡ ಎನ್.ಆರ್.ಸಂತೋಷ್ ಸೇರಿ ಹಲವರ ಜೊತೆಗೆ ಬಿಜೆಪಿ ಬೆಂಬಲದಿಂದ ಗೆದ್ದಿರುವ ಸ್ಥಳೀಯ ಸಂಸ್ಥೆಗಳ ಸದಸ್ಯರು, ಮುಖಂಡರೂ ಸಭೆಯಲ್ಲಿ ಭಾಗಿಯಾಗಿದ್ದರು.

ಸಚಿವರು ಮಾತನಾಡುವ ವೇಳೆ ಎರಡು ಬಣದ ನಡುವೆ ದಿಢೀರ್ ಜಗಳ ಶುರುವಾಗಿದೆ. ಚುನಾವಣಾ ಬೆಂಬಲ ನೀಡುವ ವಿಚಾರದಲ್ಲಿ ನೋಡ ನೋಡುತ್ತಿದ್ದಂತೆಯೇ ಕೈ ಕೈ ಮಿಲಾಯಿಸಿದ್ದಾರೆ.

ಬಿಜೆಪಿ ಮುಖಂಡ ಮರಿಸ್ವಾಮಿ ಅವರ ಬೆಂಬಲಿಗರಾದ ರಂಗನಾಥ್ ಎಂಬುವವರ ಮೇಲೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿದ್ದ ಎನ್ ಆರ್ ಸಂತೋಷ್ ಅವರ ಬೆಂಬಲಿಗರು ಹಲ್ಲೆ ನಡೆಸಿದರು. ಹಲ್ಲೆಯಿಂದ ರಂಗನಾಥ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.

ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಅವರನ್ನು ವೇದಿಕೆ ಮೇಲೆ ಕುಳ್ಳಿರಿಸಿದಕ್ಕೆ ಸ್ಥಳದಲ್ಲಿದ್ದ ಮತ್ತೊಂದು ಬಣ ಆಕ್ಷೇಪ ವ್ಯಕ್ತಡಿಸಿತು. ಸಂತೋಷ್ ಅವರು ಮೂಲ ಬಿಜೆಪಿ ಮುಖಂಡರಿಗೆ ತೊಂದರೆ ಕೊಡುತ್ತಿದ್ದಾರೆ. ಸುಳ್ಳು ಪ್ರಕಱಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ಅಂತಹವರಿಗೆ ವೇದಿಕೆಯಲ್ಲಿ ಮಣೆ ಹಾಕುವುದಾದರೆ ನಾವೇಕೆ ಬೆಂಬಲ ಕೊಡಬೇಕು ಎಂದು ತಗಾದೆ ತೆಗೆದರು. ಇದು ಮಾರಾಮಾರಿಗೆ ಎಡೆ ಮಾಡಿಕೊಟ್ಟಿತು.

ಇದಕ್ಕೂ ಮುನ್ನ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್, ಮಾಜಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ ಸೇರಿದಂತೆ ಮುಖಂಡರು ಆಕ್ರೋಶಗೊಂಡ ಕಾರ್ಯಕರ್ತರನ್ನು ಸಮಾಧಾನಪಡಿಸಲು ಯತ್ನಿಸಿದರು, ಆದರೆ, ಅದರಿಂದ ಪ್ರಯೋಜನವಾಗಲಿಲ್ಲ. ಈ ಬೆಳವಣಿಗೆಯಿಂದ ಅರಸೀಕೆರೆ ಬಿಜೆಪಿಯಲ್ಲಿ ಬಣ ರಾಜಕೀಯ ಬೀದಿಗೆ ಬಿದ್ದಂತಾಗಿದೆ.

SCROLL FOR NEXT