ರಾಜಕೀಯ

ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಚುನಾವಣೆ: ಮತ ಎಣಿಕೆ ಕಾರ್ಯ ಆರಂಭ, 90 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

Sumana Upadhyaya

ಬೆಂಗಳೂರು: ರಾಜ್ಯದ ಮೂರೂ ಪಕ್ಷಗಳ ರಾಜಕೀಯ ಭವಿಷ್ಯಕ್ಕೆ ಮತ್ತು ಮುಂದಿನ 2023ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು ಪರಿಗಣಿಸಲಾಗಿರುವ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಮಂಗಳವಾರ ಪ್ರಕಟವಾಗುತ್ತಿದ್ದು, ಮತ ಎಣಿಕೆ ಕಾರ್ಯ ಆರಂಭವಾಗಿದೆ. 

ಮಧ್ಯಾಹ್ನ ಹೊತ್ತಿಗೆ 90 ಅಭ್ಯರ್ಥಿಗಳ ಭವಿಷ್ಯ ಬಹುತೇಕ ಖಚಿತವಾಗಲಿದೆ. ರಾಜ್ಯದ 25 ವಿಧಾನಸಭಾ ಕ್ಷೇತ್ರಗಳಿಗೆ ಮೊನ್ನೆ ಡಿಸೆಂಬರ್ 10ರಂದು ಚುನಾವಣೆ ನಡೆದಿತ್ತು. 

ಕಾಂಗ್ರೆಸ್ ಮತ್ತು ಬಿಜೆಪಿ ತಲಾ 20 ಕ್ಷೇತ್ರಗಳಲ್ಲಿ ಮತ್ತು ಜೆಡಿಎಸ್ 6 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಅದರ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಗೆ ಜಿಲ್ಲಾ ಕೇಂದ್ರಗಳಲ್ಲಿ ಆರಂಭಗೊಂಡಿದೆ. ಜಿಲ್ಲಾಧಿಕಾರಿಗಳು ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಎಣಿಕೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿಗೆ 14 ಅಥವಾ ಹೆಚ್ಚಿನ ಸ್ಥಾನಗಳು: 25 ಸ್ಥಾನಗಳಿಗೆ ಮತ ಎಣಿಕೆ ಕಾರ್ಯ ಆರಂಭವಾಗುವ ಹೊತ್ತಿನಲ್ಲಿ ಆಂತರಿಕ ಸಮೀಕ್ಷೆಯಿಂದ ಬಿಜೆಪಿಗೆ 14 ಅಥವಾ ಅದಕ್ಕಿಂತ ಹೆಚ್ಚಿನ ಸ್ಥಾನಗಳು ಸಿಗಬಹುದು ಎಂದು ತಿಳಿದುಬಂದಿದೆ. ಇಷ್ಟು ಬಂದರೆ ಬಿಜೆಪಿಗೆ ಮೇಲ್ಮನೆಯಲ್ಲಿ 32 ಸೀಟುಗಳನ್ನು ಸದ್ಯ ಹೊಂದಿದ್ದು ಇನ್ನು ಮುಂದೆ 39 ಸ್ಥಾನಗಳು ಲಭ್ಯವಾಗಬಹುದು.

ಈಗಿರುವ 25 ಸೀಟುಗಳಿಂದ ಜನವರಿ 5ರಂದು ಕೆಲವರು ನಿವೃತ್ತವಾಗಲಿದ್ದು, ಹೊಸ ಸದಸ್ಯರು ನಂತರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದಿನ ಫಲಿತಾಂಶದಿಂದ ವಿಧಾನ ಮಂಡಲ ಚಳಿಗಾಲ ಅಧಿವೇಶನಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. 

ವಿಧಾನ ಪರಿಷತ್ತಿನಲ್ಲಿ ಸರಳ ಬಹುಮತ ಬಿಜೆಪಿಗೆ ಸಿಗಬೇಕೆಂದರೆ 38 ಸೀಟುಗಳು ಬೇಕಾಗುತ್ತದೆ. ಇಷ್ಟು ಸಿಕ್ಕಿದರೆ ಮುಂದಿನ ದಿನಗಳಲ್ಲಿ ಅದು ಜೆಡಿಎಸ್ ಗೆ ಅವಲಂಬಿಸಬೇಕಾಗಿಲ್ಲ. 

ಇನ್ನು ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್ ನ ಸದಸ್ಯ ಬಲ ಪರಿಷತ್ತಿನಲ್ಲಿ 29ರಿಂದ 22ಕ್ಕೆ ಇಳಿಕೆಯಾಗಲಿದೆ. 13 ಸೀಟುಗಳನ್ನು ಹೊಂದಿರುವ ಜೆಡಿಎಸ್ 11 ಸೀಟುಗಳಿಗೆ ಕೊನೆಯಾಗಬಹುದು ಎಂದು ಸಮೀಕ್ಷೆ ಹೇಳುತ್ತದೆ. ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ 6 ಸೀಟುಗಳಲ್ಲಿ ಮಾತ್ರ ಸ್ಪರ್ಧಿಸಿದ್ದು ಅಲ್ಲಿ ಮಾತ್ರ ಗೆಲುವಿನ ನಿರೀಕ್ಷೆಯಲ್ಲಿ ಜೆಡಿಎಸ್ ಇದೆ.

SCROLL FOR NEXT