ರಾಜಕೀಯ

ಬೆಳಗಾವಿ ಸೋಲಿಗೆ ಪಕ್ಷದ ಕಾರ್ಯಕರ್ತರೇ ಹೊಣೆ; ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮನಸ್ಥಿತಿ ಕಾಂಗ್ರೆಸ್ ನದ್ದು: ಕೆ ಎಸ್ ಈಶ್ವರಪ್ಪ

Sumana Upadhyaya

ಬೆಳಗಾವಿ: ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶದ ಜನರು ಯಾವ ಪಕ್ಷದತ್ತ ಒಲವು ತೋರಿಸಿದ್ದಾರೆ ಎನ್ನುವುದನ್ನು ತೋರಿಸುವ ಫಲಿತಾಂಶ ಈ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ. ಭಾರತೀಯ ಜನತಾ ಪಾರ್ಟಿ ಹಿಂದಿನ ವಿಧಾನ ಪರಿಷತ್ ನಲ್ಲಿದ್ದ 6 ಮಂದಿಗೆ ಅವಕಾಶವನ್ನು ಮತ್ತೆ ಕೊಟ್ಟಿತ್ತು. ನಾವೀಗ ಆರರಿಂದ 11 ಸ್ಥಾನಕ್ಕೆ ಜಿಗಿದಿದ್ದು, 5 ಸ್ಥಾನವನ್ನು ಹೆಚ್ಚು ಬಿಜೆಪಿ ಗೆದ್ದಿದೆ.

ಕಾಂಗ್ರೆಸ್ ನಿಂದ ಎರಡು ಸ್ಥಾನ, ಜೆಡಿಎಸ್ ನಿಂದ ಮೂರು ಸ್ಥಾನ ನಮಗೆ ಈ ಬಾರಿ ಸಿಕ್ಕಿದೆ. ಕಾಂಗ್ರೆಸ್ ನವರು ಚುನಾವಣೆಯಲ್ಲಿ ಸೋತರೂ ಕೂಡ ಜಟ್ಟಿ ಕೆಳಗೆ ಬಿದ್ದರೂ ಕೂಡ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆ ನೆನಪಾಗುತ್ತಿದೆ ಎಂದು ಗ್ರಾಮಾಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಬೆಳಗಾವಿಯಲ್ಲಿಂದು ಅಧಿವೇಶನಕ್ಕೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿ, ಚುನಾವಣೆಯಲ್ಲಿ ಸೋತರೂ ಕೂಡ ಮತ್ತೆ ನಾವೇ ಗೆದ್ದಿದ್ದೇವೆ ಎನ್ನುವುದು ಆಶ್ಚರ್ಯವನ್ನುಂಟುಮಾಡುತ್ತದೆ, ನಾವು ಪೂರ್ಣ ಬಹುಮತದತ್ತ ಹೆಜ್ಜೆ ಇಟ್ಟಿದ್ದು, ಕಾಂಗ್ರೆಸ್ ತನ್ನ ಸ್ಥಾನವನ್ನು ಕಳೆದುಕೊಂಡಿದೆ. ವಿಧಾನಸಭೆಯಲ್ಲಿ ಪೂರ್ಣ ಬಹುಮತ ಜೊತೆಗೆ ವಿಧಾನ ಪರಿಷತ್ ನಲ್ಲಿಯೂ ಬಹುಮತ ಹೊಂದುತ್ತಿರುವ ಸಂದರ್ಭದಲ್ಲಿ ಮಸೂದೆಗಳನ್ನು ಪಾಸ್ ಮಾಡಲು ನಮಗೆ ಅನುಕೂಲವಾಗುತ್ತದೆ ಎಂದರು.

ಬೆಳಗಾವಿ ಸೋಲಿಗೆ ಕಾರ್ಯಕರ್ತರೇ ಕಾರಣ, ಸೋಲಿನ ಹೊಣೆಯನ್ನು ಅವರೇ ಹೊರಬೇಕು, ಮತದಾರರ ತೀರ್ಮಾನವನ್ನು ಪ್ರಶ್ನೆ ಮಾಡುವುದಿಲ್ಲ ಎಂದರು. 

ಜನತಾ ಪಾರ್ಟಿಗೆ ಧಮ್ ಇಲ್ಲ ಎಂದು ಸಿದ್ದರಾಮಯ್ಯನವರ ಹೇಳಿಕೆಗೆ ಉತ್ತರಿಸಿದ ಅವರು, ಧಮ್ ಇರುವುದನ್ನು ತೋರಿಸುವುದು ಚುನಾವಣೆಯಲ್ಲಿ ಗೆಲ್ಲುವುದರಲ್ಲ,ಮತದಾರರ, ಜನರ ಮನ ಗೆಲ್ಲುವುದರಲ್ಲಿ ಎಂದರು.

ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಬಗ್ಗೆ ಆಡಳಿತದಲ್ಲಿರುವ ಸರ್ಕಾರವೇ ತೀರ್ಮಾನ ಮಾಡುವುದು ಹೊರತು ವಿರೋಧ ಪಕ್ಷಗಳಲ್ಲ, ಮತಾಂತರದಿಂದ ರಾಜ್ಯದಲ್ಲಿ ಎಷ್ಟೋ ಮಂದಿ ಬಡವರು ದುರುಪಯೋಗವಾಗುತ್ತಿದ್ದಾರೆ, ಮತಾಂತರ ಎಂದರೆ ಭಾರತ-ಪಾಕಿಸ್ತಾನ ಆಟದಂತೆ, ಹಿಂದೂ ಧರ್ಮವನ್ನು ಉಳಿಸಲು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುತ್ತಿದ್ದೇವೆ ಎಂದು ಈಶ್ವರಪ್ಪ ಹೇಳಿದರು.

SCROLL FOR NEXT