ರಾಜಕೀಯ

ಬೆಳಗಾವಿಯಲ್ಲಿ ಕಮಲ ಸೋಲಿಗೆ ಕಾಂಗ್ರೆಸ್, ಬಿಜೆಪಿ ನಾಯಕರ 'ರಹಸ್ಯ ಸಭೆ' ಕಾರಣ: ಲಖನ್ ಜಾರಕಿಹೊಳಿ

Lingaraj Badiger

ಬೆಳಗಾವಿ: ಬೆಳಗಾವಿ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋಲಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ನಡೆಸಿದ ಗೌಪ್ಯ ಸಭೆಯೇ ಕಾರಣ ಎಂದು ವಿಜೇತ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಬುಧವಾರ ಹೇಳಿದ್ದಾರೆ. 
   
ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ತಮ್ಮ ಸಹೋದರ ಶಾಸಕ ರಮೇಶ್ ಜಾರಕಿಹೊಳಿ ಕಾರಣ ಎಂದು ಆರೋಪ ಮಾಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಲಖನ್ ಜಾರಕಿಹೊಳಿ, ಚುನಾವಣೆಗೂ ಮುನ್ನ ನಡೆದ ಕಾಂಗ್ರೆಸ್ ಮತ್ತು ಬಿಜೆಪಿಯ ಸ್ವಯಂ ಘೋಷಿತ ನಾಯಕರ ಗೌಪ್ಯ ಸಭೆಯೇ ಕಮಲದ ಸೋಲಿಗೆ ಕಾರಣ ಎಂದರು. 

ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದಾರೆ. ‘ಬಿಜೆಪಿ ಅಭ್ಯರ್ಥಿ ಸೋಲಿಗೆ ರಮೇಶ್ ಜಾರಕಿಹೊಳಿ ಅವರನ್ನೇ ಹೊಣೆಗಾರರನ್ನಾಗಿಸಲು ಕೆಲವು ಮುಖಂಡರು ಪ್ರಯತ್ನಿಸುತ್ತಿರುವುದು ದುರದೃಷ್ಟಕರ’ ಎಂದರು.
   
ತಮ್ಮ ಸಹೋದರರಾದ ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಚುನಾವಣೆಯಲ್ಲಿ ತಮ್ಮ ಬೆಂಬಲಕ್ಕೆ ನಿಂತಿದ್ದರೆ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಗೆಲುವು ಸಾಧಿಸುತ್ತಿದ್ದೆ ಎಂದು ಲಖನ್ ಹೇಳಿದ್ದಾರೆ.

ಜಿಲ್ಲೆಯಲ್ಲಿ 13 ಶಾಸಕರು ಮತ್ತು ಇಬ್ಬರು ಸಂಸದರಿದ್ದರೂ ಬಿಜೆಪಿಗೆ ಬೆಳಗಾವಿಯಲ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದ ಅವರು, ಪಕ್ಷದ ಒಂದು ವರ್ಗದ ಮುಖಂಡರು ರಮೇಶ್ ಸೋಲಿಗೆ ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ. ಆದರೆ ಗೆದ್ದರೆ ಅದೇ ನಾಯಕರು ಅವರಿಗೆ ಮನ್ನಣೆ ನೀಡುತ್ತಾರಾ? ಎಂದು ಪ್ರಶ್ನಿಸಿದರು.
   
ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಅವರಿಂದ ಮಾತ್ರ ಬಿಜೆಪಿ ಬಲವರ್ಧನೆ ಸಾಧ್ಯ ಎಂದು ಲಖನ್ ಜಾರಕಿಹೊಳಿ ಅವರು ಹೇಳಿದ್ದಾರೆ.

SCROLL FOR NEXT