ರಾಜಕೀಯ

ಮತಾಂತರ ಕಾಯ್ದೆ ನಮ್ಮ ಕಾಲದ್ದಲ್ಲ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಸ್ಪಷ್ಟನೆ

Srinivasamurthy VN

ಬೆಳಗಾವಿ: ಮತಾಂತರ ಕಾಯ್ದೆ ನಮ್ಮ ಕಾಲದ್ದಲ್ಲ ಎಂದು ಕರ್ನಾಟಕ ವಿಧಾನಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಕುರಿತು ನಡೆದ ಚರ್ಚೆ ವೇಳೆ ಬಿಜೆಪಿ ಸದಸ್ಯರ ಆರೋಪಗಳಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, 'ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ನಮ್ಮ ಸರ್ಕಾರ ಮುಂದಾಗಿತ್ತು ಎಂದು ಕೆಲವರು ಹೇಳ್ತಿದ್ದಾರೆ. ಇದು ತಪ್ಪು ಕಲ್ಪನೆ. ಅದು ನಮ್ಮ ಕಾಲದಲ್ಲಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ನವೆಂಬರ್ 5, 2009ರಲ್ಲಿ ಆರ್​ಎಸ್​ಎಸ್​ ಪರ ಒಲವು ಇದ್ದ ಚಿದಾನಂದ ಮೂರ್ತಿ, ನರಹರಿ, ಬಿ.ಎನ್ ಮೂರ್ತಿ, ಜಯದೇವ್, ಆರ್ ಲೀಲಾ ಲಾ ಕಮಿಷನ್​ನ ಜಸ್ಟಿಸ್ ಮಳಿಮಠಗೆ ವರದಿ ಕೊಟ್ಟಿದ್ದರು. ಇದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 29, 2013ರಲ್ಲಿ ವರದಿ ಕೊಟ್ಟಿದ್ದರು. ಆದರೆ ಸಂಪುಟದಲ್ಲಿ ಚರ್ಚೆಗೆ ಬಂದಿರಲಿಲ್ಲ. ಇದನ್ನು ಎಷ್ಟೋ ಬಾರಿ ತಿರಸ್ಕಾರ ಮಾಡಲಾಗಿದೆ ಎಂದು ಹೇಳಿದರು.

ಮತಾಂತರ ನಿಷೇಧ ಮಸೂದೆ ಆರ್​ಎಸ್​ಎಸ್​ ಕೂಸು
ಅಂತೆಯೇ ಮತಾಂತರ ನಿಷೇಧ ಮಸೂದೆ ಕುರಿತಂತೆ ಆರ್ ಎಸ್ ಎಸ್ ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, 'ಮಹಿಳೆಯರು, ದಲಿತರನ್ನ ಮತಾಂತರ ಮಾಡಿದ್ರೆ, ಶಿಕ್ಷೆ ಪ್ರಮಾಣ ಹೆಚ್ಚು ಮಾಡಿದ್ದಾರೆ‌. ಇದು ಆರ್​ಎಸ್​ಎಸ್​ ಕೈವಾಡದಿಂದ ಬಂದಿರುವ ವಿಧೇಯಕ ಎಂದು ಕಿಡಿಕಾರಿದರು. 

'ಜೆಡಿಎಸ್​ನವರು ಏನು ಮಾಡುತ್ತಾರೆ ನಮಗೆ ಗೊತ್ತಿಲ್ಲ. ಕಾಯ್ದೆಯ ಪ್ರಸ್ತಾಪಕ್ಕೆನೇ ವಿರೋಧ ಮಾಡಿದ್ದೇವೆ. ಯಾವ ಉದ್ದೇಶಕ್ಕೆ ಈ ಬಿಲ್​ ತರುತ್ತಾರೆ ನಮಗೆ ಗೊತ್ತಾಗ್ತಿಲ್ಲ. ರಾಜ್ಯದಲ್ಲಿ ಜ್ವಲಂತ ಸಮಸ್ಯೆ ಸಾಕಷ್ಟಿವೆ, ಅದರ ಬಗ್ಗೆ ಚರ್ಚಿಸಲಿ. ಈ ಕಾಯ್ದೆ ಆರ್​ಎಸ್​ಎಸ್​​ನವರ ಕೂಸು. ಜನರ ಮನಸ್ಸು ಕೆಡಿಸಲು ತಂದಿರುವಂತಹ ಕಾಯ್ದೆ ಇದು. ಕಾಯ್ದೆ ಜಾರಿ ಮಾಡಿದ್ರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ನಾವು ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇವೆ. 2023ಕ್ಕೆ ಮತ್ತೆ ನಾವೇ ಅಧಿಕಾರಕ್ಕೆ ಬಂದು ಕಾಯ್ದೆ ತೆಗೆದುಹಾಕ್ತೇವೆ ಎಂದರು.

ಸಮಸ್ಯೆಗಳನ್ನು ಮರೆಮಾಚಲು ಕಾನೂನು
ಸದನದಲ್ಲಿ ಮತಾಂತರದ ಬಗ್ಗೆ ವಿವೇಕಾನಂದ, ಗಾಂಧೀಜಿ ಹೇಳಿದ್ದರು ಎಂಬುದನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು, ‘‘ಸಂವಿಧಾನದಲ್ಲಿ ಈಗಾಗಲೇ ಈ ಕಾನೂನು ಇದೆ. ಗುಜರಾತ್ ಸರ್ಕಾರ ತಂದ ಬಿಲ್​ಗೆ ಹೈಕೋರ್ಟ್ ತಡೆ ನೀಡಿದೆ. ಅದೇ ರೀತಿ ರಾಜ್ಯದಲ್ಲಿ ತಂದಿರುವ ವಿಧೇಯಕ ಸಹ ನಿಲ್ಲಲ್ಲ. ಬಲವಂತವಾಗಿ ಮತಾಂತರ ಮಾಡಿದರೆ ಶಿಕ್ಷೆ ಕೊಡಲಿ.  ರಾಜ್ಯದಲ್ಲಿ ಸಮಸ್ಯೆಗಳು ಕಿತ್ತು ತಿನ್ನುತ್ತಿದ್ದರೂ ಏನೂ ಮಾಡಲಿಲ್ಲ. ವಿಷಯವನ್ನು ಡೈವರ್ಟ್ ಮಾಡಲು ಇಂತಹ ಕಾನೂನು ತಂದಿದ್ದಾರೆ. ಇದು ಜನವಿರೋಧಿ, ಮನುಷ್ಯ ವಿರೋಧಿ, ಸಂವಿಧಾನವಿರೋಧಿ ಕಾನೂನು. ಈ ಕಾನೂನನ್ನು ಕಾಂಗ್ರೆಸ್ ಪಕ್ಷ ಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದರು.
 

SCROLL FOR NEXT