ರಾಜಕೀಯ

ಮಾತಿನ ಕದನ ಇಲ್ಲಿಗೇ ನಿಲ್ಲಿಸಿ, ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ: ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಖಡಕ್ ವಾರ್ನಿಂಗ್!

Sumana Upadhyaya

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಮಂಡ್ಯ ರಾಜಕೀಯದ್ದೇ ರಾಜ್ಯದಲ್ಲಿ ಸುದ್ದಿಯಾಗುತ್ತಿದೆ. ಮಂಡ್ಯ ಸಂಸದೆ ಸುಮಲತಾ ಮತ್ತು ಜೆಡಿಎಸ್ ನಾಯಕರಾದ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರ ಮಧ್ಯೆ ಕೆಆರ್ ಎಸ್ ಡ್ಯಾಂನ ವಿಚಾರದಲ್ಲಿ ತೀವ್ರ ವಾಗ್ದಾಳಿಯೇ ನಡೆದು ವೈಯಕ್ತಿಕ ಮಟ್ಟದಲ್ಲಿಯೂ ಪರಸ್ಪರ ಟೀಕೆ ನಡೆಯುತ್ತಿದೆ.

ಎರಡು ದಿನಗಳ ಹಿಂದೆ ಬೆಳವಣಿಗೆಗಳನ್ನು ನೋಡುತ್ತಿದ್ದೇನೆ, ಈ ಬಗ್ಗೆ ಏನೂ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಇದೀಗ ಕದನಕ್ಕೆ ವಿರಾಮ ಹಾಕಲು ಮಧ್ಯಪ್ರವೇಶಿಸಿದ್ದಾರೆ ಎಂದು ತಿಳಿದುಬಂದಿದೆ.

ಜೆಡಿಎಸ್ ನಾಯಕರು ಮಾತಿನಲ್ಲಿ ಹಿಡಿತ ಸಾಧಿಸುವಂತೆ, ಈ ವಿಚಾರವನ್ನು ಇಲ್ಲಿಗೇ ಬಿಡುವಂತೆ ಜೆಡಿಎಸ್ ನಾಯಕರಿಗೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಟೀಕೆ-ಟಿಪ್ಪಣಿಗಳು ತೀವ್ರ ವೈಯಕ್ತಿಕ ಮಟ್ಟಕ್ಕೆ ಹೋದರೆ ಇದರಿಂದ ಪಕ್ಷಕ್ಕೆ ಧಕ್ಕೆಯಾಗುತ್ತದೆ, ರಾಜ್ಯದ ಜನತೆಗೆ ಬೇರೆ ಸಂದೇಶ ರವಾನೆಯಾಗುತ್ತದೆ, ಅದಕ್ಕೆ ಅವಕಾಶ ಮಾಡಿಕೊಡದಂತೆ ದೇವೇಗೌಡರು ತಮ್ಮ ಪಕ್ಷದ ನಾಯಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೆಆರ್ ಎಸ್ ಡ್ಯಾಂನ ಬಿರುಕು ಮತ್ತು ಸುತ್ತಮುತ್ತಲ ಪ್ರದೇಶಗಳ ಅಕ್ರಮ ಗಣಿಗಾರಿಕೆ ವಿಷಯ ಹೆಚ್ ಡಿ ಕುಮಾರಸ್ವಾಮಿ ಮತ್ತು ಸುಮಲತಾ ಮಧ್ಯೆ ತೀರ ವೈಯಕ್ತಿಕವಾಗಿ ಹೋಗುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಂಡ ವಾಗ್ದಾಳಿ, ಕದನವನ್ನೇ ಮತ್ತೆ ರಾಜ್ಯದ ಜನತೆ ನೋಡುತ್ತಿದ್ದಾರೆ. 

SCROLL FOR NEXT