ರಾಜಕೀಯ

ಮಂತ್ರಿ ಸ್ಥಾನ ಹೋದರೆ ಗೂಟ ಹೋದಂತೆ: ಸಚಿವ ಈಶ್ವರಪ್ಪ

Raghavendra Adiga

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಸಚಿವ ಸ್ಥಾನದಿಂದ ಕೆ.ಎಸ್. ಈಶ್ವರಪ್ಪರನ್ನು ಹಿಂಪಡೆಯುವ ಬಗೆಗಿನ ಆಡಿಯೋ ಬಹಿರಂಗ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಮಂತ್ರಿಗಿರಿ ಹೋದರೆ ಗೂಟ ಹೋದಂತೆ ಎಂದಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ,ಮಂತ್ರಿ ಸ್ಥಾನ ಹೋದರೆ ಹೋಗಲಿ. ನಾನೇನೂ ಗೂಟ ಹೊಡೆದುಕೊಂಡು ಕೂರಲು ಬಂದಿಲ್ಲ. ಮಂತ್ರಿ ಸ್ಥಾನ ಇಲ್ಲವಾದರೆ ಪಕ್ಷ ಸಂಘಟನೆಯ ಕೆಲಸ ಮಾಡುತ್ತೇನೆ. ಸಂಘಟನೆಯ ಹಿರಿಯರು ವಹಿಸಿಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದರು.

ನಾನದನ್ನು ಹೇಳಿಲ್ಲ, ಧ್ವನಿ ತಮ್ಮದಲ್ಲ ಯಾರೋ ಹುಚ್ಚರು ಮಾಡಿದ್ದು ಎಂದು ರಾಜ್ಯಾಧ್ಯಕ್ಷ ಕಟೀಲ್ ಹೇಳಿದ್ದಾರೆ. ಅವರ ಹೇಳಿಕೆಗೆ ನನ್ನ ಸಂಪೂರ್ಣ ಸಹಮತವಿದೆ. ಹಾಗಾಗಿ ಆಡಿಯೋವನ್ನು ಯಾರು ಮಾಡಿದ್ದಾರೆ ಎನ್ನುವ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು.

ನಾನು ಆರ್.ಎಸ್.ಎಸ್ ನವನಾಗಿದ್ದು, ದೇಶ, ಸಮಾಜ ನನ್ನ ಮೊದಲ ಆದ್ಯತೆ, ಪಕ್ಷ ನನಗೆ ಅನ್ಯಾಯ ಮಾಡಿಲ್ಲ, ಯಾರೂ ಷಡ್ಯಂತ್ರ ನಡೆಸಿಲ್ಲ. ಈ ಆಡಿಯೋ ವಿಚಾರದಲ್ಲಿ ನಳಿನ್ ಕುಮಾರ್ ಅವರನ್ನು ಬಲಿಪಶು ಮಾಡುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.

ದೇವೇಗೌಡರನ್ನು ಸನ್ಮಾನಿಸಲು ಹಾರ ತುರಾಯಿ ಒಯ್ಯುತ್ತಿದ್ದರು

ದೆಹಲಿಗೆ ಹೊರಟ ಯಡಿಯೂರಪ್ಪ ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪದ ಬಗ್ಗೆ ಮಾತನಾಡಿದ ಸಚಿವ ಈಶ್ವರಪ್ಪ "ದೇವೇಗೌಡರು ಪ್ರಧಾನಿಯಾದಾಗ ಅವರನ್ನು ಭೇಟಿಯಾಗಲು ಹೋಗುವವರು ಬ್ಯಾಗ್ ನಲ್ಲಿ ಹಾರ ತುರಾಯಿ ಒಯ್ಯುತ್ತಿದ್ದರು. ಯಡಿಯೂರಪ್ಪ ಕೂಡ ಕೇಂದ್ರದ ನೂತನ ಸಚಿವರನ್ನು ಅಭಿನಂದಿಸಲು ಬ್ಯಾಗಿನಲ್ಲಿ ಹಾರ ಒಯ್ದಿದ್ದಾರೆ. ಆದರೆ ಕುಮಾರಸ್ವಾಮಿ ಗ್ರಾಮ ಪಂಚಾಯ್ ಸದಸ್ಯನಿಗಿಂತ ಕೀಳಾಗಿ ಇಳಿದು ಮಾತನಾಡುತ್ತಾರೆ. ಕುಮಾರಸ್ವಾಮಿ ಹಾಗೇ ಮುಂದುವರಿದರೆ ಜನರು ಛೀಮಾರಿ ಹಾಕುತ್ತಾರೆ" ಎಂದರು.

SCROLL FOR NEXT