ರಾಜಕೀಯ

ಪೆಗಾಸಸ್ ವಿವಾದ: ಇದೇನು ಹೊಸದಲ್ಲ, ಅಧಿಕಾರಕ್ಕೆ ಬರಲು ಬಿಜೆಪಿ ಪ್ರಯೋಗಿಸುವ ಅಸ್ತ್ರಗಳಲ್ಲಿ ಇದೂ ಒಂದು ಎಂದ ಹೆಚ್.ಡಿ. ಕುಮಾರಸ್ವಾಮಿ

Manjula VN

ಬೆಂಗಳೂರು: ದೇಶದಲ್ಲಿ ಪೆಗಾಸಸ್ ಬೇಹುಗಾರಿಕೆ ವಿಚಾರ ಕುರಿತು ರಾಜ್ಯದಲ್ಲಿಯೂ ವಿರೋಧ ತೀವ್ರವಾಗಿ ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಪೆಗಾಸಸ್ ಬೇಹುಗಾರಿಕೆ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಸಿಲುಕಿಕೊಂಡಿದೆ. ಇದು ಮಾನವ ಹಕ್ಕು ಉಲ್ಲಂಘನೆಯಂತಹ ಪ್ರಕರಣವಾದರೂ ಇತ್ತೀಚೆಗೆ ಕೇಂದ್ರ ಆದ್ಯತೆ ಮೇಲೆ ಗೂಢಚರ್ಯೆ ನಡೆಸುತ್ತಿರುವುದು ಹೊಸದೇನಲ್ಲ. ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು, ರಾಜ್ಯಗಳಲ್ಲಿ ಸರ್ಕಾರ ಕೆಡವಿ, ಸರ್ಕಾರವನ್ನು ತರಲು ಬಿಜೆಪಿ ಪ್ರಯೋಗಿಸಿರುವ ಅಸ್ತ್ರಗಳಲ್ಲಿ ಇದೂ ಒಂದು ಎಂದು ಆರೋಪಿಸಿದ್ದಾರೆ. 

ನನ್ನ ಮೇಲೆ ಗೂಢಚರ್ಯೆ ನಡೆಸಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಕೊನೆಗೆ ನನ್ನ ವಿರುದ್ಧವೇ ಫೋನ್ ಕದ್ದಾಲಿಕೆ ಆರೋಪ ಮಾಡಿತು. ಸಿಬಿಐ ತನಿಖೆ ನಡೆಸಿತು. ಅದಾಗಲೇ ಅಪಮಾರ್ಗದಲ್ಲಿ ಹೆಜ್ಜೆ ಹಾಕಿದ್ದ ಬಿಜೆಪಿ, ನನ್ನ ಮೇಲಿನ ತನಿಖೆ ಮೂಲಕ ಆತ್ಮವಂಚನೆಯಿಂದ ನಡೆದುಕೊಂಡಿದೆ. ಅಧಿಕಾರಕ್ಕಾಗಿ ಬಿಜೆಪಿ ಕೀಳು ಮಟ್ಟಕ್ಕಿಳಿಯುತ್ತಿದೆ. ಇದು ಅಪಾಯಕಾರಿ ಎಂದು ಟೀಕಿಸಿದ್ದಾರೆ. 

ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಹೋರಾಟಗಾರರ ಮೇಲೆ ಗೂಢಚರ್ಯೆ ನಡೆಸಿರುವ ಬಿಜೆಪಿ ಮುಂದೊಂದು ದಿನ ಅಗತ್ಯಬಿದ್ದಾಗ ಜನರ ವೈಯಕ್ತಿಕ ಬದುಕಿನಲ್ಲಿ ಇಣುಕುವುದಿಲ್ಲ ಎಂಬುದಕ್ಕೆ ಖಚಿತತೆ ಇದೆಯೇ? ಅಂತಹ ದಿನವೂ ದೂರವಿಲ್ಲ. ಬಿಜೆಪಿ ದಮನಕಾರಿ ನಡೆ ಈಗ ಮಾನವ ಹಕ್ಕುಗಳತ್ತ ಕೇಂದ್ರೀಕೃತವಾಗಿದೆ. ಬಿಜೆಪಿಯ ಇಂಥ ಕೃತ್ಯಗಳ ಬಗ್ಗೆ ಜನರು ಜಾಗೃತರಾಗಬೇಕು" ಎಂದು ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.

SCROLL FOR NEXT