ರಾಜಕೀಯ

ತಾಕತ್ತಿದ್ದರೆ ಬಿಜೆಪಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಹೇಳಿಕೆ: ಸಿದ್ದರಾಮಯ್ಯ ವಿರುದ್ಧ ನಳಿನ್ ಕುಮಾರ್ ಕಟೀಲ್ ಕಿಡಿ

Manjula VN

ಉಡುಪಿ: ತಾಕತ್ತಿದ್ದರೆ ಬಿಜೆಪಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಭಾನುವಾರ ತೀವ್ರವಾಗಿ ಕಿಡಿಕಾರಿದ್ದಾರೆ. 

ಪರ್ಕಳದಲ್ಲಿ ಹಡಿಲುಭೂಮಿ ಕೃಷಿ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಂದೆ ಅಹಿಂದಾ ಹೋರಾಟ ಮಾಡಿದವರು. ಅಹಿಂದಾ ಹೋರಾಟ ಮಾಡಿ ಮುಖ್ಯಮಂತ್ರಿಯಾದರು. ಸಿಎಂ ಆದ ಮೇಲೆ ಅಹಿಂದ ಮರೆತರು. ಮುಖ್ಯಮಂತ್ರಿಯಾದ ಮೇಲೆ ಅವರು ಹಿಂದುಳಿದ ವರ್ಗಕ್ಕೆ ಏನೂ ಮಾಡಿಲ್ಲ. ದಲಿತ ಮುಖ್ಯಮಂತ್ರಿ ಎಂಬ ಚರ್ಚೆಯನ್ನೇ ಮುಚ್ಚಿ ಹಾಕಿದರು. ಕಾಂಗ್ರೆಸ್ ನಲ್ಲಿ ರಾತ್ರಿ-ಹಗಲು ಕೆಲಸ ಮಾಡಿದ ಜಿ. ಪರಮೇಶ್ವರ್ ರನ್ನು ಮೂಲೆಗುಂಪು ಮಾಡಿದರು. ಪರಮೇಶ್ವರ ಮತ್ತು ಖರ್ಗೆಯನ್ನು ಸೋಲಿಸಿದ ಇತಿಹಾಸ ಇದೆ. ತಾಕತ್ ಇದ್ದರೆ ದಲಿತ ಸಿಎಂ ಗೆ ಮಾಡಿ ಎನ್ನುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದ್ದಾರೆ. 

ವಾಜಪೇಯಿ ಸರ್ಕಾರ ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದೆ. ನರೇಂದ್ರ ಮೋದಿ ದಲಿತ ರಾಷ್ಟ್ರಪತಿಯನ್ನು ದೇಶಕ್ಕೆ ಕೊಟ್ಟಿದ್ದಾರೆ. ಯಡಿಯೂರಪ್ಪ ಗೋವಿಂದ ಕಾರಜೋಳ ರನ್ನು ಉಪಮುಖ್ಯಮಂತ್ರಿಯಾಗಿ ಮಾಡಿದ್ದಾರೆ. ಕೇಂದ್ರದಲ್ಲಿ ನಾರಾಯಣಸ್ವಾಮಿ ಸಚಿವರಾಗಿದ್ದಾರೆ. ಕೇಂದ್ರ ಮಂತ್ರಿಮಂಡಲದಲ್ಲಿ ಶೇ.30 ಎಸ್ ಸಿ ಎಸ್ ಟಿ ಮಂತ್ರಿಗಳು ಇದ್ದಾರೆ. ಕಾಂಗ್ರೆಸ್ ದಲಿತರಿಗೆ ಏನು ಮಾಡಿದೆ ಎಂದು ತಿಳಿಸಲಿ ಎಂದು ಹೇಳಿದ್ದಾರೆ. 

ಬಳಿಕ ನಾಯಕತ್ವ ಬದಲಾವಣೆ ವಿಚಾರ ಕುರಿತು ಮಾತನಾಡಿದ ಅವರು, ರಾಜ್ಯದ ರಾಜ್ಯಾಧ್ಯಕ್ಷನಾಗಿ ನನಗೆ ಈ ಬಗ್ಗೆ ಯಾವುದೇ ರೀತಿಯ ಮಾಹಿತಿಗಳೂ ಇಲ್ಲ. ಪ್ರಸ್ತುತ ನನಗೆ ತಿಳಿದಿರುವ ಮಾಹಿತಿಗಳೇನಿದ್ದರೂ ಅದು ಮಾಧ್ಯಮಗಳಿಂದ ತಿಳಿದಿರುವುದೇ ಆಗಿದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಯಡಿಯೂರಪ್ಪ ಅವರನ್ನು ಕೊಂಡಾಡಿದ ಅವರು, ರಾಜ್ಯದಲ್ಲಿ ಕೃಷಿಗೆ ಪ್ರಧಾನ ಆದ್ಯತೆ ಕೊಟ್ಟಿದ್ದರೆ ಅದು ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಪ್ರಥಮ ರೈತರ ಬಜೆಟ್ ಮಂಡನೆ ಮಾಡಿದವರು ಯಡಿಯೂರಪ್ಪ. ಈ ಮೂಲಕ ರೈತ ಗೀತೆಗೆ ಗೌರವ ತಂದುಕೊಟ್ಟವರು ಯಡಿಯೂರಪ್ಪ. ರೈತರ ಸಾಲ ಮನ್ನಾ ಮಾಡಿದ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ. ಪ್ರಧಾನಿ ಮೋದಿಯವರು ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ 6 ಸಾವಿರ ರೂ. ಪ್ರೋತ್ಸಾಹಧನ ಕೊಟ್ಟರು. ಆದರೆ, ಯಡಿಯೂರಪ್ಪ ಅವರು ಅದು ಕಡಿಮೆಯಾಯಿತು ಎಂದು ಅದಕ್ಕೆ ರಾಜ್ಯ ಸರ್ಕಾರದಿಂದ ರೂ.4 ಸಾವಿರ ಹೆಚ್ಚುವರಿ ಕೊಟ್ಟರು ಎಂದು ಹೇಳಿದರು.

SCROLL FOR NEXT