ರಾಜಕೀಯ

ಯಡಿಯೂರಪ್ಪನವರು ನಮ್ಮ ಸರ್ವಶ್ರೇಷ್ಠ ನಾಯಕರು, ಇಲ್ಲಿ ಯಾವುದೇ ಬಣ ಇಲ್ಲ: ನಳಿನ್ ಕುಮಾರ್ ಕಟೀಲು 

Sumana Upadhyaya

ಬೆಂಗಳೂರು: ಬಿಜೆಪಿಯಲ್ಲಿ ವಲಸಿಗರು, ಮೂಲ ನಾಯಕರು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಪಕ್ಷಕ್ಕೆ ಬಂದು ಚುನಾವಣೆಯಲ್ಲಿ ನಿಂತು ಗೆದ್ದ ನಂತರ ಅವರು ಬಿಜೆಪಿ ಪಕ್ಷದವರು, ಎಲ್ಲರೂ ಒಂದೇ ಕುಟುಂಬದಂತೆ, ಹೀಗಾಗಿ ಸಂಪುಟ ರಚನೆ ವೇಳೆ ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯವನ್ನು ಪರಿಶೀಲಿಸಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.

ಬೆಂಗಳೂರಿನ ರಾಜಭವನದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭ ಮುಗಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿರುವುದು ಪಕ್ಷದಲ್ಲಿ ಎಲ್ಲರಿಗೂ ಖುಷಿಯ ವಿಚಾರ. ನಾನು ಮತ್ತು ಬೊಮ್ಮಾಯಿ ಸ್ನೇಹಿತರು, ಪಕ್ಷದ ಸೂಚನೆಯಂತೆ ಇನ್ನು ಮುಂದೆಯೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

ಸಚಿವ ಸಂಪುಟ ರಚನೆ ಬಗ್ಗೆ ವರಿಷ್ಠರಲ್ಲಿ ಚರ್ಚಿಸಿ ಇನ್ನೊಂದು ವಾರದಲ್ಲಿಯೇ ಮಾಡಲಾಗುವುದು ಎಂದು ಸಹ ಇದೇ ಸಂದರ್ಭದಲ್ಲಿ ಕಟೀಲು ತಿಳಿಸಿದರು.

ಯಡಿಯೂರಪ್ಪನವರು ಸರ್ವಶ್ರೇಷ್ಠ ನಾಯಕರು: ಬಿ ಎಸ್ ಯಡಿಯೂರಪ್ಪನವರು ನಮ್ಮೆಲ್ಲರ ಸರ್ವಸಮ್ಮತ ಸರ್ವಶ್ರೇಷ್ಠ ನಾಯಕರು, ಅವರ ಮಾರ್ಗದರ್ಶನದಡಿಯಲ್ಲಿ ನಾವೆಲ್ಲರೂ ಮುಂದೆ ಸಾಗುತ್ತೇವೆ. ಯಡಿಯೂರಪ್ಪನವರ ಬಣ, ಮೂಲ ಮತ್ತು ವಲಸಿಗರ ಬಣವೆಂಬುದು ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

SCROLL FOR NEXT