ರಾಜಕೀಯ

ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಸೇರಲು ಆಕಾಂಕ್ಷಿಗಳ ಕಸರತ್ತು?

Shilpa D

ಶಿವಮೊಗ್ಗ/ದಾವಣಗೆರೆ: ಬಿಎಸ್ ಯಡಿಯೂರಪ್ಪ ಅವರ ನಿರ್ಗಮನದೊಂದಿಗೆ ಹಲವು ಆಕಾಂಕ್ಷಿಗಳು ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ. 

ದೆಹಲಿ ನಾಯಕರ ಜೊತೆ ಸಂಪರ್ಕ ಹೊಂದಿರುವ ಹಲವು ಬಿಜೆಪಿ ಮುಖಂಡರು ಬಸವರಾಜ ಬೊಮ್ಮಾಯಿ ಸಂಪುಟ ಸೇರಲು ಕಸರತ್ತು ನಡೆಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ನಾಲ್ಕು ಬಾರಿ ಶಾಸಕರಾಗಿರುವ ಅರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಮತ್ತು ಸೊರಬ ಶಾಸಕ ಕುಮಾರ್ ಬಂಗಾರಪ್ಪ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.  

ಅರಗ ಜ್ಞಾನೇಂದ್ರ ಹಿರಿಯ ಒಕ್ಕಲಿಗ ನಾಯಕರಾಗಿದ್ದಾರೆ, ಆದರೆ ಒಕ್ಕಲಿಗ ಸಮುದಾಯದ ಬೇರೆ ಶಾಸಕರಿಗೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ದೊರೆತಿರಲಿಲ್ಲ, ಹೀಗಾಗಿ ಸದ್ಯ ಅರಗ ಜ್ಞಾನೇಂದ್ರ ಸಚಿವ ಸಂಪುಟದ ಆಕಾಂಕ್ಷಿಯಾಗಿದ್ದಾರೆ.

ಹರತಾಳು ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ಇಬ್ಬರು ಈಡಿಗ ಸಮುದಾಯದವರಾಗಿದ್ದಾರೆ.ಇಬ್ಬರು ಬಿಜೆಪಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಿಸಲು ನೆರವಾಗಿದ್ದಾರೆ.

ಎಸ್ ಎಂ ಕೃಷ್ಣ ಮತ್ತು ಯಡಿಯೂರಪ್ಪ ಸಂಪುಟದಲ್ಲಿ ಕೆಲಸ ಮಾಡಿ ಇಬ್ಬರಿಗೂ ಅನುಭವವಿದೆ, ಎಸ್ ಕೃಷ್ಣ ಸರ್ಕಾರದಲ್ಲಿ ಕುಮಾರ್ ಬಂಗಾರಪ್ಪ ಸಣ್ಣ ನೀರಾವರಿ ಸಚಿವರಾಗಿದ್ದರು ಮತ್ತು ಹರತಾಳು ಹಾಲಪ್ಪ ಯಡಿಯೂರಪ್ಪ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂತ್ರಿಯಾಗಿದ್ದರು.

ಈ ಸಮುದಾಯಕ್ಕೆ ಯಡಿಯೂರಪ್ಪ ಅವರ ಕ್ಯಾಬಿನೆಟ್‌ನಲ್ಲಿ ಸ್ಥಾನ ಸಿಗದ ಕಾರಣ ಅವರಲ್ಲಿ ಯಾರೊಬ್ಬರಿಗಾದರೂ ಸಚಿವ ಸ್ಥಾನ ಪಡೆಯುವ ಸಾಧ್ಯತೆಯಿದೆ. ಹರತಾಳು ಹಾಲಪ್ಪ ಯಡಿಯೂರಪ್ಪ ಆಪ್ತರಾಗಿರುವ ಕಾರಣ ಸಹಾಯವಾಗುವ ಸಾಧ್ಯತೆಯಿದೆ. 
ಹೀಗಾಗಿ ಮೂವರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ.

ಇನ್ನೂ ಮಧ್ಯ ಕರ್ನಾಟಕದ ಶಾಸಕರುಗಳಾದ ಪೂರ್ಣಿಮಾ ಶ್ರೀನಿವಾಸ್-ಹಿರಿಯೂರು, ಎಂಪಿ ರೇಣುಕಾಚಾರ್ಯ- ಹೊನ್ನಾಳಿ, ಜಿಎಚ್ ತಿಪ್ಪಾರೆಡ್ಡಿ- ಚಿತ್ರದುರ್ಗ, ಮತ್ತು ಬಿ. ಶ್ರೀರಾಮುಲು ಅವರಿಗೆ ಮಹತ್ವದ ಹುದ್ದೆ ನೀಡುವ ಸಾಧ್ಯತೆಯಿದೆ.

ಚಿತ್ರದುರ್ಗದಲ್ಲಿ ಹಿಂದುಳಿದ ವರ್ಗಗಳ ಸಮುದಾಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಬಿಜೆಪಿ ಹೈಕಮಾಂಡ್ ಈ ಭಾಗದ ಜನಪ್ರತಿನಿಧಿಗಳಿಗೆ ಪ್ರಾಶಸ್ತ್ಯ ನೀಡುವ ಸಾಧ್ಯತೆಯಿದೆ.  ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗೊಲ್ಲ ಸಮುದಾಯದವರಾಗಿದ್ದಾರೆ. ಚಿತ್ರದುರ್ಗ, ತುಮಕೂರು, ಬಳ್ಳಾರಿ, ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಯಲ್ಲಿ   ಈ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲಿದ್ದಾರೆ.

ಆದರೆ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಆರ್ ಎಸ್ ಎಸ್ ಬೆಂಬಲವಿಲ್ಲ, ಎರಡು ಬಾರಿ ಶಾಸಕಿಯಾಗಿದ್ದಾರೆ,  ತಿಪ್ಪಾರೆಡ್ಡಿ ಹಿರಿಯ ಶಾಸಕರಾಗಿದ್ದು ಪ್ರಬಲ ಆಕಾಂಕ್ಷಿಯಾಗಿದ್ದಾರೆ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೂಡ ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಸಿದ್ದಾರೆ. ಇನ್ನೂ ದಾವಣಗೆರೆ ಶಾಸಕ ರವೀಂದ್ರ ನಾಥ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ, ಅವರ ವಯಸ್ಸು ಅವರಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ.

SCROLL FOR NEXT