ರಾಜಕೀಯ

ಯಡಿಯೂರಪ್ಪ ಪದತ್ಯಾಗದ ಮೂಲಕ ಚಾಮರಾಜನಗರಕ್ಕೆ ಅಂಟಿದ್ದ ಕಳಂಕ ದೂರ?  ಸಿಎಂ ರಾಜಿನಾಮೆಯಿಂದ ಜಿಲ್ಲೆಯ ಜನರಿಗೆ ಸಂತೋಷ!

Shilpa D

ಮೈಸೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ಅವರು ರಾಜಿನಾಮೆ ನೀಡಿದ್ದರಿಂದ ಅವರ ಬೆಂಬಲಿಗರಿಗೆ ತೀವ್ರ ನಿರಾಶೆಯಾಗಿದೆ. ಆದರೆ ವಿಶೇಷ ಕಾರಣಕ್ಕಾಗಿ ಚಾಮರಾಜನಗರ ಜಿಲ್ಲೆ ಜನರಿಗೆ ಸಂತಸ ಉಂಟಾಗಿದೆ.

ತಮ್ಮ ಅಧಿಕಾರವಧಿಯಲ್ಲಿ ಒಮ್ಮೆಯೂ ಚಾಮರಾಜನಗರಕ್ಕೆ ಭೇಟಿ ನೀಡದಿದ್ದರೂ ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದಾರೆ, ಇದರಿಂದ ಜಿಲ್ಲೆಯ ಜನ ಸಂತೋಷಗೊಂಡಿದ್ದಾರೆ. 

ತಮ್ಮ ಜಿಲ್ಲೆಗೆ ಅಂಟಿದ ಕಳಂಕ ತೊಲಗಿದ್ದಕ್ಕಾಗಿ ಗಡಿ ಜಿಲ್ಲೆಯ ಜನರು ಖುಷಿಯಾಗಿದ್ದಾರೆ. ಚಾಮರಾಜನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಹಣೆಪಟ್ಟಿ ಕಳಚಿದ್ದಕ್ಕಾಗಿ ಸಂತೋಷ ವ್ಯಕ್ತ ಪಡಿಸಿದ್ದಾರೆ.

ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಯಾವುದೇ ಮುಖ್ಯಮಂತ್ರಿ ಚಾಮರಾಜನಗರಕ್ಕೆ ಭೇಟಿ ನೀಡಿದರೇ ತಮ್ಮ ಹುದ್ದೆ ಕಳೆದುಕೊಳ್ಳುತ್ತಾರೆ ಎಂಬ ಮೂಡ ನಂಬಿಕೆ ಹಲವು ದಶಕಗಳಿಂದ ರಾಜಕೀಯ ವಲಯದಲ್ಲಿ ನಡೆದುಕೊಂಡು ಬಂದಿದೆ.  ಹೀಗಾಗಿ ದಶಕಗಳ ಕಾಲದಿಂದ ಯಾರೇ ಸಿಎಂ ಆದರೂ ಚಾಮರಾಜನಗರಕ್ಕೆ ಭೇಟಿ ನೀಡದೇ ದೂರ ಉಳಿಯುತ್ತಿದ್ದರು.

ಯಡಿಯೂರಪ್ಪ ಕೂಡ ಇದಕ್ಕೆ ಹೊರತಾಗಿರಲಿಲ್ಲ, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದುರಂತ ನಡೆದು 2 ಮಂದಿ ಸಾವನ್ನಪ್ಪಿದ್ದರೂ ಸಿಎಂ ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡಿರಲಿಲ್ಲ. ಆದರೂ ಸಿಎಂ ತನ್ನ ಸ್ಥಾನ ಕಳೆದುಕೊಂಡಿದ್ದಾರೆ, ಇದು ಜಿಲ್ಲೆಯ ಜನರಿಗೆ ಸಂತಸ ತಂದಿದೆ. ಚಾಮರಾಜನಗರ ಕಳಂಕಿತ ಜಿಲ್ಲೆಯಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.

ಸಿಎಂ ಗಳಾಗಿದ್ದ ಡಿ.ದೇವರಾಜ ಅರಸ್, ಆರ್.ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್ ಆರ್ ಬೊಮ್ಮಾಯಿ ಮತ್ತು ವೀರೇಂದ್ರ ಪಾಟೀಲ್ ಚಾಮರಾಜನಗರಕ್ಕೆ ಭೇಟಿ ನೀಡಿದ ನಂತರ ಅಧಿಕಾರಕಳೆದುಕೊಂಡರು ಎಂಬ ನಂಬಿಕೆಯಿದೆ, ಆದರೆ ಸಿಎಂ ಆಗಿದ್ದ ಅವಧಿಯಲ್ಲಿ ಈ ಎಲ್ಲಾ ಮೂಡ ನಂಬಿಕೆಗಳಿಗೆ ಸೆಡ್ಡುಹೊಡೆದಿದ್ದ ಸಿದ್ದರಾಮಯ್ಯ ಸುಮಾರು 8-9 ಬಾರಿ ಜಿಲ್ಲೆಗೆ ಭೇಟಿ ನೀಡಿದ್ದರೂ, ಆಗಿದ್ದರೂ ಅವರು ತಮ್ಮ ಅಧಿಕಾರ ಪೂರೈಸಿದ್ದರು.

ಆದರೆ ಜಿಲ್ಲೆಗೆ ಭೇಟಿ ನೀಡದಿದ್ದರೂ ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದರೆ,ಹೀಗಾಗಿ ಚಾಮರಾಜನಗರಕ್ಕೆ ಅಂಟಿದ್ದ ಕಳಂಕ ದೂರಾಗಿದೆ ಎಂದು ಜನತೆ ತಿಳಿಸಿದ್ದಾರೆ. ಇದರ ಮೂಲಕ ಜಿಲ್ಲೆಗೆ ಅಂಟಿದ್ದ ಶಾಪ ತೊಳೆದಂತಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ ಎಂಬುವರು ತಿಳಿಸಿದ್ದಾರೆ.

1997 ರಲ್ಲಿ ಮೈಸೂರಿನಿಂದ ಹೊಸದಾಗಿ ಚಾಮರಾಜನಗರ ಜಿಲ್ಲೆ ರಚಿಸಲ್ಪಟ್ಟಿತ್ತು. ಆದರೆ ಹೊಸ ಜಿಲ್ಲೆಯ ಅಭಿವೃದ್ಧಿ ಕನಸಾಗಿಯೇ ಉಳಿಯಿತು. ಇನ್ನದರೂ ನಾಯಕರೆಂದು ಕರೆಸಿಕೊಳ್ಳುವವರು ಜಿಲ್ಲೆಗೆ ಅಂಟಿದ್ದ ಶಾಪಗ್ರಸ್ತ ನಗರ ಎಂಬ ಹಣೆಪಟ್ಟಿ ಕಳಚಿ ಅಭಿವೃದ್ಧಿಯತ್ತ ಗಮನ ಹರಿಸಬೇಕು, ಹೊಸ ಸಿಎಂ ನಮ್ಮ ಜಿಲ್ಲೆಗೆ ಭೇಟಿ ನೀಡಿ ಹಳೇಯ ಮೂಢನಂಬಿಕೆಗಳನ್ನು ಮುರಿಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿರೇಶ್ ಎಂಬುವರು ಹೇಳಿದ್ದಾರೆ.

SCROLL FOR NEXT