ರಾಜಕೀಯ

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದು ಯಡಿಯೂರಪ್ಪನವರಿಂದ, ಹೀಗಾಗಿ ಅವರ ಪರವಾಗಿ ಕೆಲಸ ಮಾಡುತ್ತಾರೆ: ಸಿದ್ದರಾಮಯ್ಯ 

Sumana Upadhyaya

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಮನವರಿಕೆಯಾದದ್ದರಿಂದಲೇ ಸಿಎಂ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಾವಣೆ ಮಾಡಲಾಗಿದೆ.ಪ್ರಧಾನಿ ಮೋದಿಯವರೇ ಬಿ ಎಸ್ ಯಡಿಯೂರಪ್ಪನವರನ್ನು ಬದಲಾಯಿಸಿದ್ದಾರೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ ಎಸ್ ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಮಾಡಿರುವುದರಿಂದ ಅದಕ್ಕೆ ಏನೂ ಪ್ರಯೋಜನವಾಗುವುದಿಲ್ಲ, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸೋಲುವುದು ಖಚಿತ ಎಂದಿದ್ದಾರೆ.

ಬಿ ಎಸ್ ಯಡಿಯೂರಪ್ಪನವರ ಒತ್ತಡದಿಂದಾಗಿ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಗಿದೆ. ಹೀಗಾಗಿ ಸಹಜವಾಗಿ ಬಸವರಾಜ ಬೊಮ್ಮಾಯಿಯವರು ಯಡಿಯೂರಪ್ಪನವರು ಹೇಳಿದಂತೆ ಕೇಳಿಕೊಂಡು ಅವರ ಪರವಾಗಿ ಕೆಲಸ ಮಾಡುತ್ತಾರೆ, ಬೊಮ್ಮಾಯಿಯವರು ನಾಮಕಾವಸ್ತೆ ಸಿಎಂ ಅಷ್ಟೆ ಎಂದು ಆಪಾದಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ 2019ರ ಜುಲೈ 26ರಂದು ಅಧಿಕಾರಕ್ಕೆ ಬಂದಿತ್ತು. ಮೊನ್ನೆ ಜುಲೈ 26, 2021ರಂದು ಯಡಿಯೂರಪ್ಪನವರು ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಆಪರೇಷನ್ ಕಮಲ ಮಾಡಿ 14 ಮಂದಿ ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿದ್ದರು. ಹಿಂದಿನ ನಮ್ಮ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿದ್ದು, ಹೀಗಾಗಿ ಇಂದಿನ ಬಿಜೆಪಿ ಸರ್ಕಾರ ನ್ಯಾಯಸಮ್ಮತ ಸರ್ಕಾರವಲ್ಲ ಎಂದರು.

ಭ್ರಷ್ಟ ಸರ್ಕಾರ: ಕಳೆದ ಎರಡು ವರ್ಷಗಳಲ್ಲಿ ಈ ಸರ್ಕಾರ ಆಡಳಿತ ಬಗ್ಗೆ ಗಮನ ಹರಿಸಿಯೇ ಇಲ್ಲ, ಭ್ರಷ್ಟಾಚಾರ, ಕೆಟ್ಟ ಆಡಳಿತಕ್ಕೆ ಹೆಸರುವಾಸಿಯಾಯಿತು, ಖುರ್ಚಿಗಾಗಿ ನಾಯಕರು ಬಡಿದಾಡಿಕೊಂಡರು ಎಂದರು.

ಕೇಂದ್ರ ಕೂಡ ಸುಳ್ಳು ಹೇಳಿದೆ: ಆಕ್ಸಿಜನ್ ಕೊರತೆಯಿಂದ ಯಾರೂ ಸಾಯಲಿಲ್ಲ ಎಂದು ನಮ್ಮ ಆರೋಗ್ಯ ಸಚಿವ ಸುಧಾಕರ್ ಅವರಂತೆ ಕೇಂದ್ರ ಕೂಡ ಸುಳ್ಳು ಹೇಳಿದೆ. ಸುಧಾಕರ್ ಅವರಂತೆ ಕೇಂದ್ರ ಸಚಿವರು ಕೂಡ ಸುಳ್ಳು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಆಪಾದಿಸಿದರು.

ಅಪ್ಪನ ಗುಣ ಬರತ್ತೆ ಅಥವಾ ಬರಲ್ಲ ಎಂದು ಹೇಳಿಲ್ಲ: ನಿನ್ನೆ ಮೈಸೂರಿನಲ್ಲಿ ಮಹಾತ್ಮಾ ಗಾಂಧೀಜಿಯವರ ಪುತ್ರ ಕುಡುಕನಾಗಿರಲಿಲ್ಲವೇ ಎಂದು ನೀಡಿದ್ದ ಹೇಳಿಕೆಗೆ ಸಂಬಂಧಪಟ್ಟಂತೆ ಅಪ್ಪನ ಗುಣ ಮಕ್ಕಳಿಗೆ ಬರಬೇಕೆಂದಿಲ್ಲ ಅಥವಾ ಬರಲಿಕ್ಕಿಲ್ಲ ಎಂದು ನಾನು ಹೇಳಿದ್ದಲ್ಲ, ಅಪ್ಪನಿಗಿಂತ ಮಗ ಬುದ್ದಿವಂತನಾಗಬಹುದು ಅಥವಾ ದಡ್ಡವನಾಗಬಹುದು ಎಂದು ಹೇಳುವಾಗ ಉದಾಹರಣೆಯಾಗಿ ಮಹಾತ್ಮಾ ಗಾಂಧೀಜಿಯವರ ಪುತ್ರನ ಬಗ್ಗೆ ಹೇಳಿದೆಯಷ್ಟೆ ಎಂದು ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.

SCROLL FOR NEXT