ರಾಜಕೀಯ

ಸರ್ಕಾರ, ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವವರಿಗೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎಚ್ಚರಿಕೆ

Srinivas Rao BV

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಕೆಲವು ಶಾಸಕರು ಬೇಡಿಕೆ ಇಡುತ್ತಿರುವ ಪರಿಣಾಮ ಉಂಟಾಗಿರುವ ಪರಿಸ್ಥಿತಿಯನ್ನು ಪರಿಶೀಲಿಸಲು ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸರ್ಕಾರ, ನಾಯಕತ್ವದ ವಿರುದ್ಧ ಹೇಳಿಕೆ ನೀಡುತ್ತಿರುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. 

ಪಕ್ಷದ ಉಸ್ತುವಾರಿ ಪ್ರತಿಯೊಬ್ಬ ಶಾಸಕರು, ಸಚಿವರ ಅಭಿಪ್ರಾಯ ಸಂಗ್ರಹಿಸುತ್ತಿದ್ದ ನಡುವೆಯೂ ಬಿಜೆಪಿಯಲ್ಲಿನ ನಾಯಕತ್ವದ ಬದಲಾವಣೆ ಕೂಗಿನ ಗಲಾಟೆ ಜೋರಾಗಿಯೇ ಇತ್ತು. ಕೆಲವು ಭಿನ್ನಮತೀಯ ನಾಯಕರು ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದರೂ ಸಹ ಪಕ್ಷ ಒಗ್ಗಟ್ಟಿನಿಂದಲೇ ಇದೆ ಎಂಬುದನ್ನು ತೋರ್ಪಡಿಸಿಕೊಳ್ಳುವುದಕ್ಕೆ ಅರುಣ್ ಸಿಂಗ್ ಪ್ರಯತ್ನಿಸಿದರು. 

ಭಿನ್ನಮತೀಯ ನಾಯಕರು, ಸರ್ಕಾರ, ಬಿ.ಎಸ್ ಯಡಿಯೂರಪ್ಪ ಅವರ ನಾಯಕತ್ವದ ವಿರುದ್ಧ, ನೀಡುತ್ತಿರುವ ಹೇಳಿಕೆಯಿಂದ ಪಕ್ಷದ ಘನತೆಗೆ ಧಕ್ಕೆ ಉಂಟಾಗಿದ್ದು, ಲಕ್ಷಾಂತರ ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಎಂದು ಅರುಣ್ ಸಿಂಗ್ ಹೇಳಿದ್ದು ಈ ರೀತಿಯಲ್ಲಿ ಬಹಿರಂಗ ಹೇಳಿಕೆ ನೀಡುತ್ತಿರುವವರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. 

ಎಂಎಲ್ ಸಿ ವಿಶ್ವನಾಥ್, ಅರುಣ್ ಸಿಂಗ್ ಭೇಟಿಯ ನಂತರ ನಾಯಕತ್ವದ ಬದಲಾವಣೆಗೆ ಬಿಗಿ ಪಟ್ಟು ಹಿಡಿದು ಬಹಿರಂಗ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಯಡಿಯೂರಪ್ಪ ಸರ್ಕಾರವನ್ನು ಬಿಜೆಪಿಯಲ್ಲಿ ರಾಕ್ಷಸ ಸರ್ಕಾರವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಟೀಕಿಸಿದ್ದ ಅವರು, ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದೂ ಆರೋಪಿಸಿದ್ದರು. 

ಇದರ ಜೊತೆಗೆ ಶಾಸಕ ಅರವಿಂದ್ ಬೆಲ್ಲದ್ ಅವರ ಟೆಲಿಫೋನ್ ಕದ್ದಾಲಿಕೆ ಆರೋಪವೂ ಕೇಳಿಬಂದಿದೆ. ಅರುಣ್ ಸಿಂಗ್ ತಮ್ಮ ರಾಜ್ಯ ಪ್ರವಾಸದ ಎರಡನೇ ದಿನದ ಕಾರ್ಯಕ್ರಮದಲ್ಲಿ 40 ಕ್ಕೂ ಹೆಚ್ಚು ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದು,  ನಾಯಕತ್ವದ ಬದಲಾವಣೆಗೆ ಸಂಬಂಧಿಸಿದಂತೆ ಶಾಸಕರ ಜೊತೆಗೆ ಯಾವುದೇ ರೀತಿಯ ಮಾತುಕತೆಯನ್ನೂ ನಿರಾಕರಿಸಿದ್ದಾರೆ. "ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರು ತಳಮಟ್ಟದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅರುಣ್ ಸಿಂಗ್, ಯಾವೊಬ್ಬ ಶಾಸಕರ ಹೇಳಿಕೆ, ನಡೆಗಳು ಪಕ್ಷದ ವಿರುದ್ಧ ಪಕ್ಷಕ್ಕೆ ಮುಜುಗರ ಉಂಟಾಗದಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದಾರೆ. 

ಕೇವಲ ಇಬ್ಬರು ಅಥವಾ ಮೂವರು ಮಂದಿ ಲಕ್ಷಾಂತರ ಕಾರ್ಯಕರ್ತರಿಗೆ ನೋವುಂಟುಮಾಡುತ್ತಿದ್ದು, ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದಾರೆ. ನಾವು ಇದನ್ನು ಗಮನಿಸುತ್ತಿದ್ದೇವೆ, ಅವರೊಂದಿಗೆ ಮಾತನಾಡಲಿದ್ದೇವೆ, ಪರಿಸ್ಥಿತಿ ಮಿತಿ ಮೀರಿದರೆ ಏನು ಅಗತ್ಯವಿದೆಯೋ ಅದನ್ನು ಮಾಡುತ್ತೇವೆ" ಎಂದು ಅರುಣ್ ಸಿಂಗ್ ಮಾರ್ಮಿಕವಾಗಿ ನುಡಿದಿದ್ದಾರೆ. 

SCROLL FOR NEXT