ರಾಜಕೀಯ

ಲಾಕ್‌ ಡೌನ್ ನಂತರದ ಪರಿಸ್ಥಿತಿ ಕುರಿತು ಚರ್ಚಿಸಲು ವಿಧಾನಸಭೆ ಅಧಿವೇಶನಕ್ಕೆ ಕುಮಾರಸ್ವಾಮಿ ಒತ್ತಾಯ

Nagaraja AB

ಕೋಲಾರ: ಲಾಕ್ ಡೌನ್ ನಂತರದ ಪರಿಸ್ಥಿತಿ ಕುರಿತು ಚರ್ಚಿಸಲು ಕೂಡಲೇ ವಿಧಾನಸಭೆ ಅಧಿವೇಶನ ಕರೆಯಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಂಗಾರಪೇಟೆಯಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಆಹಾರದ ಕಿಟ್ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಒಂದು ವೇಳೆ ಸರ್ಕಾರ ಕೂಡಲೇ ವಿಧಾನಸಭೆ ಅಧಿವೇಶನ ಕರೆಯದಿದ್ದಲ್ಲಿ ಜೆಡಿಎಸ್ ನಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.

ಅಧಿವೇಶನ ನಡೆದರೆ ವಿಷಯಗಳ ಕುರಿತು ಚರ್ಚೆ ನಡೆಯಲು ದಾರಿ ಸುಗಮವಾಗಲಿದೆ. ಜವಾಬ್ದಾರಿಯುತ ಮುಖಂಡನಾಗಿ, ಜನರಿಗೆ ನೆರವಾಗಲು ಸರ್ಕಾರಕ್ಕೆ ಸಲಹೆ ನೀಡುವುದಾಗಿ ಕುಮಾರಸ್ವಾಮಿ ಹೇಳಿದರು. ಆಟೋ ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಲಾಕ್ ಡೌನ್ ನಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಸಾಕಾಗುವುದಿಲ್ಲ ಎಂದರು.

ಬಿಜೆಪಿ ಮುಖಂಡರು ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು, ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಶ್ರಮಿಸಬೇಕೆಂದು ಹೇಳಿದ ಕುಮಾರಸ್ವಾಮಿ, ರಾಜ್ಯದಲ್ಲಿನ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.
 
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಜೆಡಿಎಸ್ ಕುರಿತು ಮಾತನಾಡುವ ಹಕ್ಕು ಸಿದ್ದರಾಮಯ್ಯ ಅವರಿಗಿಲ್ಲ, ಜನರಿಗಾಗಿ ಪಕ್ಷ ಕೆಲಸ ಮಾಡುತ್ತಿದೆ ಎಂದರು.

SCROLL FOR NEXT