ರಾಜಕೀಯ

ರಾಜ್ಯದಲ್ಲಿ ರಾಜಕೀಯ ಗೊಂದಲವಿಲ್ಲ, ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ; ನನ್ನ ಪುತ್ರನ ವಿರುದ್ಧದ ಆರೋಪ ಆಧಾರರಹಿತ: ಬಿ ಎಸ್ ಯಡಿಯೂರಪ್ಪ

Sumana Upadhyaya

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ರಾಜ್ಯದ ಹಿತಕ್ಕೆ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇಂದು ವಿಧಾನಸೌಧದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಕ್ಷದಲ್ಲಿ ಯಾರೋ ಒಂದಿಬ್ಬರು ವಿರೋಧ ಮಾತನಾಡಬಹುದು, ಅಂತವರು ತಮ್ಮ ಸಮಸ್ಯೆಗಳನ್ನು ಬಂದು ಮಾತನಾಡಿ ಬಗೆಹರಿಸಿಕೊಳ್ಳಲಿ, ನಾಯಕರ ಮಧ್ಯೆ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೆಚ್ ವಿಶ್ವನಾಥ್ ಆರೋಪಗಳ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ, ಅವರ ಬಗ್ಗೆ ಹೈಕಮಾಂಡ್ ತೀರ್ಮಾನಿಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಹಳ್ಳಿಹಕ್ಕಿ ಆರೋಪದ ಬಗ್ಗೆ ಮುಖ್ಯಮಂತ್ರಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದಲ್ಲಿ ರಾಜಕೀಯ ಗೊಂದಲವೇ ಇಲ್ಲ, ಯಾರೋ ಒಂದಿಬ್ಬರು ಮಾಧ್ಯಮಗಳ ಮುಂದೆ ನೀಡುವ ಹೇಳಿಕೆಗಳನ್ನು ನೀವು ಹೈಲೈಟ್ ಮಾಡುತ್ತೀರಿ, ಪಕ್ಷದ ವಿರುದ್ಧ ಮಾತನಾಡುವವರಿಗೆ ನಿನ್ನೆ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ ಎಂದರು.

ವಿಜಯೇಂದ್ರ ವಿರುದ್ಧದ ಕಿಕ್ ಬ್ಯಾಗ್ ಆರೋಪ ಕೂಡ ಆಧಾರರಹಿತ, ನೀರಾವರಿ ಇಲಾಖೆಯಲ್ಲಿನ ಟೆಂಡರ್ ಆರೋಪದ ಬಗ್ಗೆ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡುತ್ತಾರೆ ಎಂದರು.

ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣ ಕಡಿಮೆಯಾಗುತ್ತಿದೆ. ಜೂನ್ 21ರ ನಂತರ ಯಾವ್ಯಾವುದಕ್ಕೆ ರಿಯಾಯಿತಿ ನೀಡಬೇಕು, ಯಾವ ಚಟುವಟಿಕೆಗಳನ್ನು ಆರಂಭಿಸಬೇಕು ಎಂಬ ಬಗ್ಗೆ ಸಂಬಂಧಪಟ್ಟ ಸಚಿವರು, ಅಧಿಕಾರಿಗಳೊಂದಿಗೆ ನಾಳೆ ಸಂಜೆಯೊಳಗೆ ತೀರ್ಮಾನಿಸಲಾಗುವುದು ಎಂದರು.

ಉತ್ತಮ ಮುಂಗಾರು: ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಉತ್ತಮ ಮಳೆಯಾಗುತ್ತಿದೆ. ರೈತರ ಬೀಜ ಬಿತ್ತನೆ ಕಾರ್ಯ ಆರಂಭವಾಗಿದೆ. ರೈತರಿಗೆ ಬೀಜ, ರಸಗೊಬ್ಬರ ನೀಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸುತ್ತೇವೆ. ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾದರೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇವೆ ಎಂದರು.

ಅರವಿಂದ್ ಬೆಲ್ಲದ್ ಅವರು ನಿನ್ನೆ ಡಿಜಿಯವರಿಗೆ ಫೋನ್ ಕದ್ದಾಲಿಕೆ ಬಗ್ಗೆ ದೂರು ನೀಡಿದ್ದಾರೆ. ನಂತರ ಅವರು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿ ತನಿಖೆ ನಡೆಸುವಂತೆ ಹೇಳಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

SCROLL FOR NEXT