ರಾಜಕೀಯ

ಮತ್ತೆ ಸಂಪುಟ ಸೇರಲು ಕಸರತ್ತು: ಆರ್ ಎಸ್ ಎಸ್ ಮುಖಂಡರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ!

Nagaraja AB

ಬೆಳಗಾವಿ: ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಮತ್ತೆ ರಾಜ್ಯ ಸಂಪುಟದೊಳಗೆ ಸೇರಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಮನಸ್ಸು ಮಾಡದಿದ್ದರೂ, ಸಂಪುಟಕ್ಕೆ ಮರಳುವ ಕೊನೆಯ ಪ್ರಯತ್ನದಲ್ಲಿ ಮುಖಂಡರು ಮತ್ತು ಶ್ರೀಗಳನ್ನು ಜಾರಕಿಹೊಳಿ ಭೇಟಿ ಮಾಡುತ್ತಿದ್ದಾರೆ.

ಅಥಣಿಯಲ್ಲಿ ಶನಿವಾರ ಹಿರಿಯ ಆರ್ ಎಸ್ ಎಸ್ ಮುಖಂಡ, ಸಂಘಟನೆಯ ಉತ್ತರ ವಲಯದ ಮುಖ್ಯಸ್ಥ ಅರವಿಂದ್ ದೇಶಪಾಂಡೆ ಅವರನ್ನು ಭೇಟಿಯಾದ ಜಾರಕಿಹೊಳಿ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಸಂಪುಟದಿಂದ ಹೊರಬಂದ ನಂತರ ನಡೆದಿರುವ ಘಟನೆಗಳ ಬಗ್ಗೆ ಜಾರಕಿಹೊಳಿ ವಿವರಿಸಿದ್ದು, ಈ ಬಿಕ್ಕಟ್ಟಿನಿಂದ ಹೊರಬರಲು ಅವರ ಬೆಂಬಲವನ್ನು ಕೋರಿದ್ದಾರೆ ಎಂದು ಮೂಲಗಳು ಹೇಳಿವೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಅಥಣಿಯಲ್ಲಿ ಅರವಿಂದ್ ದೇಶಪಾಂಡೆ ಅವರನ್ನು ಭೇಟಿ ಮಾಡುತ್ತಿದ್ದು, ಅವರ ಮಾರ್ಗದರ್ಶನ ಮತ್ತು ಬೆಂಬಲವನ್ನು ಪಡೆಯುತ್ತಿದ್ದಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆಗಿನ ಸಭೆಗೂ ಮುನ್ನ ಹಲವು ಪ್ರಭಾವಿ ಮುಖಂಡರನ್ನು ಜಾರಕಿಹೊಳಿ ಮುಂದಿನ ದಿನಗಳಲ್ಲಿ ಭೇಟಿಯಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಅನೇಕ ಉನ್ನತ ನಾಯಕರ ಸಂಪರ್ಕದಲ್ಲಿ ಜಾರಕಿಹೊಳಿ ಇರುವುದಾಗಿ ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ. ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಆದರೆ ಬಿಜೆಪಿಯಲ್ಲಿ ಮುಂದುವರಿಯುತ್ತೇನೆ. ತನ್ನ ವಿರುದ್ಧ ಪಿತೂರಿ ನಡೆಸಿದ ಪಕ್ಷದ ಮುಖಂಡರ ಒಂದು ಭಾಗಕ್ಕೆ ಪಾಠ ಕಲಿಸುತ್ತೇನೆ ಎಂದು ಜಾರಕಿಹೊಳಿ ಶುಕ್ರವಾರ ಹೇಳಿಕೆ ನೀಡಿದ್ದರು. ಅಂತಿಮ ತೀರ್ಮಾನ ಕೈಗೊಳ್ಳುವ ಒಂದೆರಡು ವಾರಗಳ ಮುನ್ನ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 

ಈ ಮಧ್ಯೆ ಬಿಜೆಪಿ ಸಂಸ್ಕೃತಿಗೆ ಒಗ್ಗಿಕೊಳ್ಳುವುದು ಜಾರಕಿಹೊಳಿಗೆ ಕಷ್ಟವಾಗಲಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಗೆ ಸೇರ್ಪಡೆಯಾಗಬಹುದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಮರೇಗೌಡ ಬಯ್ಯಾಪುರ ಹೇಳಿದ್ದಾರೆ. 

SCROLL FOR NEXT