ರಾಜಕೀಯ

ಹಾಲು ಉತ್ಪಾದಕ ಸಂಘಗಳ ನೌಕರರನ್ನು ಕೋವಿಡ್ ವಾರಿಯರ್ಸ್ ಎಂದು ಘೋಷಿಸಿ: ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಆಗ್ರಹ

Manjula VN

ಬೆಂಗಳೂರು: ಹಾಲು ಉತ್ಪಾದಕ ಸಂಘಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರನ್ನು ಕೋವಿಡ್ ವಾರಿಯರ್ಸ್ ಎಂದು ಘೋಷಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
 
ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಪಶುವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಕೋವಿಡ್ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದ್ದಾರೆ. 

ಕೋವಿಡ್ -19 ಈಗ ಹಳ್ಳಿ ಹಳ್ಳಿಗಳನ್ನು ವೇಗವಾಗಿ ವ್ಯಾಪಿಸುತ್ತಿದೆ. ಸೋಂಕಿತರು ಹಾಲನ್ನು ಡೈರಿಗಳಿಗೆ ತಂದು ಹಾಕುತ್ತಿರುವುದರಿಂದ ರೋಗ ಇನ್ನಷ್ಟು ಹಬ್ಬುತ್ತಿದೆ. ಗ್ರಾಮೀಣ ಭಾಗದ ಈ ಹೊಸ ಸಮಸ್ಯೆಯನ್ನು ಸರ್ಕಾರ, ಕೆಎಂಎಫ್ ಮತ್ತು ಹಾಲು ಒಕ್ಕೂಟಗಳು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೆ ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ.

ಈಗಲೇ ಜಾಗೃತಿ ಮೂಡಿಸದಿದ್ದರೆ ಹಳ್ಳಿಗಳಲ್ಲಿ ಸಾವು- ನೋವಿನ ಪ್ರಮಾಣ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಕೋವಿಡ್ ಸೋಂಕಿತರ ಮನೆಯ ರಾಸುಗಳಿಂದ ಕರೆದ ಹಾಲನ್ನು ಸೋಂಕಿತರೇ ನೇರವಾಗಿ ಡೈರಿಗೆ ತಂದು ಹಾಲು ಹಾಕುವುದು ಬೇಡ ಎಂಬ ಸಲಹೆ ಮಾಡಿದ್ದಾರೆ. ಸೋಂಕಿತರಲ್ಲದ ಮನೆಯ ಆರೋಗ್ಯವಂತ ಸದಸ್ಯರು ಹಾಲನ್ನು ತಂದುಹಾಕುವುದರಿಂದ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಬಹುದು.

ಡೈರಿಗೆ ಹಾಲು ಹಾಕಲು ಬಂದವರು ಕಡ್ಡಾಯವಾಗಿ ಶುಚಿತ್ವ, ಮಾಸ್ಕ್, ಸ್ಯಾನಿಟೈಸರ್ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕಡ್ಡಾಯವಾಗಿ ಡೈರಿಗಳಲ್ಲಿ ಶುಚಿತ್ವ ಕಾಪಾಡುವುದರ ಜತೆಗೆ ಪರಸ್ಪರ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದ್ದಾರೆ. 

SCROLL FOR NEXT