ರಾಜಕೀಯ

ಹೊಸದಾಗಿ ಆಯ್ಕೆಯಾದ ಎಂಎಲ್‌ಸಿಗಳು ಅಧಿವೇಶನಕ್ಕೆ ಹಾಜರಾಗುವಂತಿಲ್ಲ!

Manjula VN

ಬೆಳಗಾವಿ: ರಾಜ್ಯಾದ್ಯಂತ 20 ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗಿರುವ ವಿಧಾನ ಪರಿಷತ್‌ನ ನೂತನ ಸದಸ್ಯರು ಡಿಸೆಂಬರ್‌ನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಹಾಜರಾಗುವಂತಿಲ್ಲ.

ಈ ಕ್ಷೇತ್ರಗಳ ಹಾಲಿ ಎಂಎಲ್‌ಸಿಗಳ ಅವಧಿ ಜನವರಿ 4 ರಂದು ಕೊನೆಗೊಳ್ಳುವ ಹಿನ್ನೆಲೆಯಲ್ಲಿ ನೂತನ ಸದಸ್ಯರು ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

ವಿಧಾನ ಪರಿಷತ್ ಚುನಾವಣೆಗೆ ಡಿಸೆಂಬರ್ 10 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಡಿಸೆಂಬರ್ 13 ರಿಂದ 24ರವರೆಗೆ ಅಧಿವೇಶನ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದ್ದು, ಈ ನಡುವೆ ಹಾಲಿ ಎಂಎಲ್‌ಸಿಗಳ ಅವಧಿ ಪೂರ್ಣಗೊಳ್ಳದ ಹೊರತು ನೂತನ ಸದಸ್ಯರು ಅಧಿವೇಶನದಲ್ಲಿ ಹಾಜರಾಗುವಂತಿಲ್ಲ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ಎಲ್ಲಾ 20 ಕ್ಷೇತ್ರಗಳಿಂದ ಹೊಸದಾಗಿ ಆಯ್ಕೆಯಾಗುವ ಎಂಎಲ್‌ಸಿಗಳು, ಹಾಲಿ ಎಂಎಲ್‌ಸಿಗಳ ಅವಧಿ ಮುಗಿದ ಒಂದು ದಿನದ ನಂತರ ಜನವರಿ 5 ರಂದು ಮಾತ್ರ ಪ್ರಮಾಣವಚನ ಸ್ವೀಕರಿಸಬೇಕಾಗುತ್ತದೆ. ಇದರಿಂದ ನೂತನವಾಗಿ ಆಯ್ಕೆಯಾಗಿರುವ ಎಂಎಲ್‌ಸಿಗಳು ಅಧಿವೇಶನಕ್ಕೆ ಹಾಜರಾಗದೆ ಹಾಲಿ ಇರುವ ಎಂಎಲ್‌ಸಿಗಳು ಮಾತ್ರ ಕಲಾಪದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದ್ದಾರೆ.

ಆದರೆ, ಚುನಾವಣಾ ಕಣದಲ್ಲಿರುವ ಹಾಲಿ ಎಂಎಲ್‌ಸಿಗಳು ಚುನಾವಣೆಯಲ್ಲಿ ಗೆದ್ದರೂ ಸೋತರೂ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹಾಲಿ ಇರುವ ಹಲವು ಸದಸ್ಯರೇ ಮತ್ತೆ ಚುನಾಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿದ್ದು, ಡಿಸೆಂಬರ್ 14 ರಂದು ಎಂಎಲ್‌ಸಿಯಾಗಿ ಗೆಲುವು ಸಾಧಿಸಿದರೂ, ತಾತ್ಕಾಲಿಕ ವೇಳಾಪಟ್ಟಿಯಂತೆ ಚಳಿಗಾಲದ ಅಧಿವೇಶನ ನಡೆದರೆ, ತಮ್ಮ ಸ್ಥಾನವನ್ನು ಉಳಿಸಿಕೊಂಡವರನ್ನು ಹೊರತುಪಡಿಸಿ, ಇತರರು ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ.

ಈ ನಡುವೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ದಿನಾಂಕ ಕುರಿತು ರಾಜ್ಯ ಸರ್ಕಾರ ಇನ್ನೂ ಅಂತಿಮ ನಿರ್ಧಾರಗಳನ್ನು ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.

ಡಿಸೆಂಬರ್ ಅಂತ್ಯದೊಳಗೆ ಅಧಿವೇಶನ ಮುಕ್ತಾಯಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಈ ನಡುವೆ ನವೆಂಬರ್ ನಲ್ಲೇ ಅಧಿವೇಶನ ನಡೆಸುವಂತೆ ಹೊರಟ್ಟಿ ಸೇರಿದಂತೆ ಹಲವು ಮುಖಂಡರು ಸರ್ಕಾರಕ್ಕೆ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.

SCROLL FOR NEXT