ಬೆಂಗಳೂರು: ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ನಡುವಲ್ಲೇ ರಾಜ್ಯ ಬಿಜೆಪಿಯು ಶನಿವಾರ ತಿರುಗೇಟು ನೀಡಿದ್ದು, ಆರೋಪ ನಿರಾಧಾರ ಎಂದು ಬಣ್ಣಿಸಿದೆ.
ಯಾವುದೇ ರೀತಿಯ ಹಗರಣಗಳೂ ನಡೆದಿಲ್ಲ. ಆದರೂ, ಹಗರಣ ನಡೆದಿದೆ ಎಂದು ಹೊಸ ಹೊಸ ನಟರಕು ಹುಟ್ಟಿಕೊಳ್ಳುತ್ತಿದ್ದಾರೆ. ಸುಳ್ಳಿನ ಬೆಟ್ಟಗಳನ್ನೇ ಸೃಷ್ಟಿಸಿ, ತಿರುಚಿದ ವಿಚಾರಗಳೊಂದಿಗೆ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯದ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಹೇಳಿದ್ದಾರೆ.
ಯಾವುದೇ ಬಿಟ್‌ಕಾಯಿನ್‌ಗಳನ್ನು ಆರೋಪಿ ಹ್ಯಾಕರ್ ಶ್ರೀಕೃಷ್ಣ ಖಾತೆಯಿಂದ ವರ್ಗಾಯಿಸಲಾಗಿಲ್ಲ ಅಥವಾ ಯಾವುದೇ ನಷ್ಟಗಳೂ ಆಗಿಲ್ಲ. ಆರೋಪಿ ಹೇಳಿಕೊಂಡಂತೆ ಇಲ್ಲಿಯವರೆಗೆ ಯಾವುದೇ ವಿದೇಶಿ ಕಾನೂನು ಜಾರಿ ಸಂಸ್ಥೆಗಳು ಅಥವಾ ವಿದೇಶಿ ಕಂಪನಿಗಳು ಹ್ಯಾಕಿಂಗ್ ಬಗ್ಗೆ ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿಲ್ಲ ಎಂದು ತಿಳಿಸಿದ್ದಾರೆ.
ಬಿಟ್‌ಫೈನೆಕ್ಸ್ ಕಂಪನಿಯ ಪ್ರತಿನಿಧಿಗಳು ಕೂಡ ಹ್ಯಾಕಿಂಗ್ ಬಗ್ಗೆ ಯಾವುದೇ ಮಾಹಿತಿಗಳನ್ನೂ ಹಂಚಿಕೊಂಡಿಲ್ಲ ಅಥವಾ ಯಾವುದೇ ಮಾಹಿತಿಯನ್ನು ಕೇಳಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಇದೇ ವೇಳೆ ಈ ಹಿಂದೆ ಗೃಹ ಸಚಿವರಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪಾತ್ರ ಮತ್ತು ಜವಾಬ್ದಾರಿಗಳ ಕುರಿತು ಕಾಂಗ್ರೆಸ್ ಆರೋಪಗಳಿಗೆ ಪ್ರತಿಕ್ರಿಯಿಸಿದ ಕಾರ್ಣಿಕ್, ಯಾವುದೇ ಹಂತದಲ್ಲೂ ಗೃಹ ಸಚಿವರು ಅಥವಾ ಯಾವುದೇ ರಾಜಕಾರಣಿ ತನಿಖೆಯೊಂದಿಗೆ ಸಂಪರ್ಕ ಹೊಂದಿಲ್ಲ. ತನಿಖೆಯ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ದಾಖಲಿಸಲಾಗಿದೆ ಮತ್ತು ನೈಜ-ಸಮಯದ ಆಧಾರದ ಮೇಲೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ, ತನಿಖೆಯ ನ್ಯಾಯಸಮ್ಮತತೆಯನ್ನು ಖಚಿತಪಡಿಸಲಾಗಿದೆ ಎಂದಿದ್ದಾರೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೂಡ ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿದ್ದು, ಹ್ಯಾಕರ್ ಮತ್ತು ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಆರೋಪಿಗಳ ಹೇಳಿಕೆಗಳನ್ನು ಆಧರಿಸಿವೆ ಕಾಂಗ್ರೆಸ್ ನಾಯಕರು ಆರೋಪಗಳನ್ನು ಮಾಡುತ್ತಿದ್ದಾರೆ. "ನಾವು ಅದನ್ನು ಬಹಿರಂಗಪಡಿಸಲು ಪ್ರಯತ್ನಿಸುತ್ತಿದ್ದೇವೆ. ಇದರಲ್ಲಿ ಮುಚ್ಚಿಡಲು ಏನೂ ಇಲ್ಲ ಮತ್ತು ನಾವು ಎಲ್ಲಾ ಮಾಹಿತಿಯನ್ನು ಇಂಟರ್‌ಪೋಲ್ ಮತ್ತು ಸಿಬಿಐನೊಂದಿಗೆ ಹಂಚಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಮಾತನಾಡಿ, ಸಿಎಂ ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರದಿಂದ ಯಾವುದೇ ತಪ್ಪುಗಳಾಗಿಲ್ಲ.. ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳಿಂದ ಪಾರದರ್ಶಕವಾಗಿ ವಿಚಾರಣೆ ನಡೆಯುತ್ತಿದೆ. ಪ್ರತಿಪಕ್ಷಗಳ ಬಳಿ ಯಾವುದೇ ಪುರಾವೆ ಇದ್ದರೆ, ಅವರು ಅದನ್ನು ನೀಡಲಿ. ವಿಪಕ್ಷಗಳು ಮಾತನಾಡಬೇಕೆಂದು ಸುಮ್ಮನೆ ಮಾತನಾಡಬಾರದು. ಸುಖಾಸುಮ್ಮನೆ ಆರೋಪ ಮಾಡುತ್ತಾ ಕತ್ತಲೆಯಲ್ಲಿ ಗುಂಡು ಹಾರಿಸುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.