ರಾಜಕೀಯ

ಬಿಟ್ ಕಾಯಿನ್ ಹಗರಣಕ್ಕೆ ಸಿದ್ದರಾಮಯ್ಯ ಪುತ್ರನನ್ನು ಎಳೆತಂದ ಬಿಜೆಪಿ: ಫೋಟೋ ಸತ್ಯಾಸತ್ಯತೆ ಏನು?

Shilpa D

ಬೆಂಗಳೂರು: ಬಿಟ್ ಕಾಯಿನ್ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಟಾರ್ಗೆಟ್ ಮಾಡಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ ನಾಯಕತ್ವದ ದೌರ್ಬಲ್ಯತೆ ಮುಚ್ಚಿಕೊಳ್ಳುವ  ಸಲುವಾಗಿ ಸಿದ್ದರಾಮಯ್ಯ ಬಿಟ್ ಕಾಯಿನ್ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.

ಮಾನ್ಯ ಸಿದ್ದರಾಮಯ್ಯ ಅವರೇ,  ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ ಹಗರಣದ ಬಗ್ಗೆ ತಾವು ಪ್ರಸ್ತಾಪಿಸಿದ್ದೀರಿ. ಈಗ ನಮಗೆ ಒಂದಿಷ್ಟು ಪ್ರಶ್ನೆಗಳಿವೆ. ಒಂದಷ್ಟು ಚಿತ್ರಗಳಿವೆ, ಅದನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ. ಉತ್ತರಿಸಿ.

ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿ ಆಸರೆ ಎಂಬಂತೆ ತಮ್ಮ ನಾಯಕತ್ವ ದುರ್ಬಲವಾಗುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಬಿಟ್ ಕಾಯಿನ್ ಆಸರೆಯಾಗಿದೆ. ಆದರೆ, ಒಂದು ಚಿತ್ರ ಸಾವಿರ ಕತೆ ಹೇಳುತ್ತದೆ. ಮತ್ತೊಮ್ಮೆ ಆಗ್ರಹ ಈ ಚಿತ್ರದಲ್ಲಿರುವ ವ್ಯಕ್ತಿಗಳನ್ನು ಗುರುತಿಸಿ ಎಂದು ಬಿಜೆಪಿ ಹೇಳಿದೆ.

ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿಗಳು ಇದ್ದಾರೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದರು. ಆದರೆ ಈಗ ದಾಖಲೆಯೇ ಇಲ್ಲ ಎನ್ನುತ್ತಿದ್ದಾರೆ. ನಿಮ್ಮ ಅತ್ಯಾಪ್ತರ ವಹಿವಾಟು ನಿಮ್ಮನ್ನು ಅಸಹಾಕನನ್ನಾಗಿ ಮಾಡಿದೆಯೇ?  ಬಿಟ್ ಕಾಯಿನ್ ಪ್ರಭಾ ವಲಯ ನಿಮ್ಮನ್ನೇ ಸುತ್ತಿಕೊಳ್ಳಬಹುದೆಂಬ ಭಯ ಕಾಡುತ್ತಿದೆಯೇ? ಎಂದು ಪ್ರಶ್ನಿಸಿದೆ.

ನಿಮ್ಮ ಅವಧಿಯಲ್ಲಿ ನಡೆದ ಈ ಹಗರಣವನ್ನು ಮುಚ್ಚಿ ಹಾಕುವುದು ನಿಮಗೆ ತೀರಾ ಅನಿವಾರ್ಯವಾಗಿತ್ತು. ಅಪ್ರಿಯವಾದ ಸತ್ಯ ಹೇಳುತ್ತೇವೆ, ಇಲ್ಲಿ ನಿಮ್ಮ ಅತ್ಯಾಪ್ತರೇ ಇದ್ದರು ಎಂಬ ಅನುಮಾನಕ್ಕೆ ಈ ಚಿತ್ರ ಪುಷ್ಠಿ ನೀಡುತ್ತಿದೆ. ಸತ್ಯ ಅನಾವರಣವಾಗುವ ಭಯಕ್ಕೆ ನೀವು ಯೂ ಟರ್ನ್ ತೆಗೆದುಕೊಳ್ಳುತ್ತಿದ್ದೀರಿ ಅಲ್ಲವೇ?

ಮಾನ್ಯ ಸಿದ್ದರಾಮಯ್ಯನವರೇ, ಬೆಂಗಳೂರಿನ ಪ್ರತಿಷ್ಠಿತ‌ ಹೊಟೇಲ್‌ನಲ್ಲಿ ನಡೆಯುತ್ತಿದ್ದ ಹುಕ್ಕಾ ಬಾರ್ ಆ ಎಲ್ಲ ಚಟುವಟಿಕೆಯ ಕೇಂದ್ರವಾಗಿತ್ತು. ಸುನೀಶ್ ಹೆಗ್ಡೆ, ಹೇಮಂತ್ ಮುದ್ದಪ್ಪ, ಶ್ರೀಕಿಯಂಥವರು ಆಗ ನಿಮ್ಮ ಮನೆಯ ಸುತ್ತಮುತ್ತಲೂ ಓಡಾಡಿರಲೂ ಬಹುದಲ್ಲವೇ!?

ಮಾನ್ಯ ಸಿದ್ದರಾಮಯ್ಯನವರೇ, ಡ್ರಗ್ಸ್ ಹಾಗೂ ಬಿಟ್ ಕಾಯಿನ್ ಅವ್ಯವಹಾರ ಬಹಿರಂಗವಾಗಿದ್ದು ನಿಮ್ಮ ಕಾಲದಲ್ಲಿ. ಒಂದೆರಡು ಕಡೆ ದಾಳಿ ನಡೆದರೂ ತನಿಖೆ ಹಠಾತ್ ಸ್ಥಗಿತಗೊಂಡಿತು. ಈ ಚಿತ್ರದಲ್ಲಿರುವ ಸುನೀಶ್ ಹೆಗ್ಡೆ ಮತ್ತು ಹೇಮಂತ್ ಜೊತೆಗಿರುವ ಎಲ್ಲರನ್ನು ನೀವು ಗುರುತಿಸಬಲ್ಲಿರಿ ಎಂಬುದು ನಮ್ಮ ನಂಬಿಕೆ. ಆ ನಂಬಿಕೆ ನಿಜವೇ ಆದರೆ ಬಿಟ್ ಕಾಯಿನ್ ಹ್ಯಾಕಿಂಗ್ ದಂಧೆ ನಿಮ್ಮ ಕಾಲದಲ್ಲೇ ಆರಂಭವಾಗಿತ್ತು. ಸಿದ್ದರಾಮಯ್ಯನವರೇ, ಆ ಬಗ್ಗೆ ನೀವು ಸ್ಪಷ್ಟ ಮಾಹಿತಿ ಹೊಂದಿದ್ದೀರಿ ಅಲ್ಲವೇ?

ಬಿಟ್ ಕಾಯಿನ್ ಹ್ಯಾಕರ್ ಶ್ರೀಕಿ ಜೊತೆಗೆ ಹೇಮಂತ್ ಮುದ್ದಪ್ಪ ಹಾಗೂ ಸುನೀಶ್ ಹೆಗ್ಡೆ ಗಾಢ ಸ್ನೇಹ ಹೊಂದಿದ್ದರು. ಶ್ರೀಕಿ ಮೂಲಕ ಗೇಮಿಂಗ್ ಸೈಟ್ ಮತ್ತು ಇ-ಪೋರ್ಟಲ್ ಹ್ಯಾಕ್ ಮಾಡಿಸಿದ್ದರು ಎಂಬುದು ಪೊಲೀಸ್ ದಾಖಲೆಯಲ್ಲಿದೆ!? ಇಲ್ಲಿ ನೋಡಿ, ಸುನೀಶ್ ಹೆಗ್ಡೆ ಮತ್ತು  ಹೇಮಂತ್ ಯಾರ ಜೊತೆಗಿದ್ದಾರೆ ಎಂದು ಒಮ್ಮೆ ನೋಡಿ ಬಿಜೆಪಿ ಫೋಟೋ ಟ್ವೀಟ್ ಮಾಡಿದೆ. ಆದರೆ ಈ ಫೋಟೋ ಸತ್ಯಾಸತ್ಯತೆ ಬಗ್ಗೆ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.

SCROLL FOR NEXT