ರಾಜಕೀಯ

ಸಿಎಂ ಅಥವಾ ನನ್ನ ಸಂಬಂಧಿಕರಾರೂ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿಲ್ಲ: ನಳಿನ ಕುಮಾರ್ ಕಟೀಲ್

Shilpa D

ಕಲಬುರಗಿ: ಮುಂದಿನ ದಿನಗಳಲ್ಲಿ ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನಾರಚನೆ ಸಾಧ್ಯತೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಳ್ಳಿಹಾಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸಂಪುಟ ಪುನಾರಚನೆ ಆಗುವುದಿಲ್ಲ ಆದರೆ ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಸಮತೋಲನಕ್ಕೆ ಆದ್ಯತೆ ನೀಡಿ ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿಗಳು ತಮ್ಮ ಸಚಿವ ಸಂಪುಟವನ್ನು ವಿಸ್ತರಣೆ ಮಾಡಲಿದ್ದಾರೆ ಎಂದು ಹೇಳಿದರು.  

ಬಿಟ್‌ಕಾಯಿನ್ ಹಗರಣದಲ್ಲಿ ಮುಖ್ಯಮಂತ್ರಿಯವರ ಸಂಬಂಧಿಕರು ಅಥವಾ ತಮ್ಮ (ಕಟೀಲು) ಸಂಬಂಧಿಕರು ಭಾಗಿಯಾಗಿದ್ದಾರೆ ಎಂಬ ವದಂತಿಯನ್ನು ಅವರು ತಳ್ಳಿಹಾಕಿದರು. ಕಾಂಗ್ರೆಸ್ ನಾಯಕರ ಬಳಿ ಯಾವುದೇ ಸಾಕ್ಷಿ  ಇದ್ದರೆ, ಅವರು ಸೂಕ್ತ ದಾಖಲೆಗಳೊಂದಿಗೆ ತಮ್ಮನ್ನು ಸಂಪರ್ಕಿಸಲಿ ಎಂದು ಹೇಳಿದ್ದಾರೆ.

ನನ್ನ ಸಂಬಂಧಿಕರು ಎಂದಿಗೂ ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವುದಿಲ್ಲ ಮತ್ತು ನಾನು ಯಾವುದೇ ಕೆಲಸಕ್ಕಾಗಿ ಅಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಸಿದ್ದರಾಮಯ್ಯ ಮತ್ತು ಅವರ ಗೆಳೆಯರು ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಎಳೆದು ತರುತ್ತಾರೆ, ಜೊತೆಗೆ ವೀರ್ ಸಾವರ್ಕರ್ ಅವರ ಹೆಸರನ್ನು ಕಾಂಗ್ರೆಸ್ ನವರು ಎಳೆದು ತಂದಿಲ್ಲವೇ, ಹೀಗಿರುವಾಗ ಅವರ ಮೃತ ಮಗ , ಹಗರಣದಲ್ಲಿ ಭಾಗಿಯಾಗಿರುವವರ ಜೊತೆ ಇರುವ  ಫೋಟೋ ಹಾಕಿದ್ದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ

ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಪಕ್ಷ 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, 15 ಸ್ಥಾನ ಗೆಲ್ಲುವ ಗುರಿ ಹೊಂದಿದೆ ಎಂದು ಕಟೀಲ್ ಹೇಳಿದರು. ಇತರ ಪಕ್ಷಗಳ ಬೆಂಬಲವಿಲ್ಲದೇ ಮಸೂದೆಯನ್ನು ಅಂಗೀಕರಿಸಲು ವಿಧಾನ ಪರಿಷತ್ತಿಗೆ ಹೆಚ್ಚು ಪ್ರಮಾಣದಲ್ಲಿ ಬಿಜೆಪಿ ಸದಸ್ಯರನ್ನು ಆಯ್ಕೆ ಮಾಡಬೇಕೆಂದು ಮತದಾರರಲ್ಲಿ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದರು.

SCROLL FOR NEXT