ರಾಜಕೀಯ

ವಿಧಾನ ಪರಿಷತ್ ಚುನಾವಣೆಗೆ ಯಾವುದೇ ವೆಚ್ಚದ ಮಿತಿ ಇಲ್ಲ, ಕಣದಿಂದ ಹಿಂದೆ ಸರಿದ ಹಲವು ಎಂಎಲ್ ಸಿಗಳು

Lingaraj Badiger

ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಸಾಮಾನ್ಯ ನಾಗರಿಕರದ್ದಲ್ಲ ಮತ್ತು ಈ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಯಾವುದೇ ವೆಚ್ಚದ ಮಿತಿ ಇಲ್ಲ. ಹೀಗಾಗಿ ಹಲವು ಹಾಲಿ ಎಂಎಲ್‌ಸಿಗಳು ಡಿಸೆಂಬರ್ 10 ರಂದು ಕೌನ್ಸಿಲ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಸಿದ್ಧರಿಲ್ಲ. ಖರ್ಚಿನ ಭಯದಿಂದ ಮತ್ತು ಹಣವಂತ ಪ್ರತಿಸ್ಪರ್ಧಿಗಳು ಅಥವಾ ದೊಡ್ಡವರ ಬೆಂಬಲವಿರುವ ಪ್ರತಿಸ್ಪರ್ಧಿಗಳ ವಿರುದ್ಧ ಸ್ಪರ್ಧಿಸಲು ಕನಿಷ್ಠ ಹತ್ತು ಎಂಎಲ್‌ಸಿಗಳು ಆಸಕ್ತಿ ತೋರಿಲ್ಲ ಎನ್ನಲಾಗಿದೆ.

ಖರ್ಚಿನ ಮೇಲೆ ಯಾವುದೇ ಮಿತಿಯಿಲ್ಲದಿರುವುದರಿಂದ, ಉತ್ತಮ ಆರ್ಥಿಕ ಬೆಂಬಲ ಹೊಂದಿರುವ ಅಭ್ಯರ್ಥಿಗಳು ಮಿತಿಗಳನ್ನು ಮುರಿಯುವ ಮತ್ತು ಹಣಬಲದ ಚುನಾವಣೆ ನಡೆಸುವ ಸಾಧ್ಯತೆಯಿದೆ. 

ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು 10 ರಿಂದ 15 ಕೋಟಿ ರೂ. ಖರ್ಚು ಮಾಡುವ ಸಾಧ್ಯತೆ ಇದೆ. “ನಮ್ಮ ಪಕ್ಷದ ಹಾಲಿ ಎಂಎಲ್‌ಸಿ ಆ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಕಣಕ್ಕಿಳಿಯಲು ಭಯ ಪಡುತ್ತಿದ್ದಾರೆ. ಎಂಎಲ್‌ಸಿ ಚುನಾವಣೆಯಲ್ಲೂ ಹಣಬಲ ಮೇಲುಗೈ ಸಾಧಿಸುತ್ತಿರುವುದರಿಂದ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಾರೆ” ಎಂದು ಜೆಡಿಎಸ್ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಅಕ್ಟೋಬರ್ 2020 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಶೇಕಡಾ 10 ರಷ್ಟು ವೆಚ್ಚ ಹೆಚ್ಚಳಕ್ಕೆ ಕಾನೂನು ಸಚಿವಾಲಯ ಅನುಮೋದಿಸಿದ ನಂತರ ಚುನಾವಣಾ ಆಯೋಗವು ಲೋಕಸಭೆ ಚುನಾವಣಾ ವೆಚ್ಚಕ್ಕಾಗಿ ರೂ 77.8 ಲಕ್ಷ ಮತ್ತು ಪ್ರತಿ ಅಭ್ಯರ್ಥಿಗೆ ವಿಧಾನಸಭಾ ಚುನಾವಣೆಗೆ ರೂ 30.8 ಲಕ್ಷ ಮಿತಿಯನ್ನು ವಿಧಿಸಿದೆ. ಈ ಹಿಂದೆ ಲೋಕಸಭೆ ಚುನಾವಣೆಗೆ 70 ಲಕ್ಷ ಮತ್ತು ವಿಧಾನಸಭೆ ಚುನಾವಣೆಗೆ 28 ಲಕ್ಷ ರೂ. ಮಿತಿ ಇತ್ತು.

2018 ರ ನವೆಂಬರ್‌ನಲ್ಲಿ ಚುನಾವಣಾ ಆಯೋಗ ಈ ಸಂಬಂಧ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದು, ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ದ್ವಿಸದಸ್ಯ ಶಾಸಕಾಂಗವನ್ನು ಹೊಂದಿರುವ ಕೌನ್ಸಿಲ್ ಚುನಾವಣೆಗಳಲ್ಲಿ ವೆಚ್ಚ ಮಿತಿಗೊಳಿಸುವಂತೆ ಕೋರಿದೆ. ಇದಕ್ಕೆ ಏಳು ರಾಷ್ಟ್ರೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಆದರೆ ಅದು ಇನ್ನೂ ಕಾನೂನಾಗಿ ರೂಪಾಂತರಗೊಂಡಿಲ್ಲ.

SCROLL FOR NEXT