ರಾಜಕೀಯ

ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಬೆಳಗಾವಿಯ ಎರಡು ಕುಟುಂಬಗಳಿಗೆ ಪ್ರತಿಷ್ಠೆಯ ಕಣ: ಜಾರಕಿಹೊಳಿ v/s ಹೆಬ್ಬಾಳ್ಕರ್

Sumana Upadhyaya

ಬೆಳಗಾವಿ: ಒಂದು ಕಾಲದಲ್ಲಿ ಮಿತ್ರರಾಗಿ ಈಗ ಶತ್ರುವಾಗಿರುವ ಜಾರಕಿಹೊಳಿ ಬ್ರದರ್ಸ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ತಂಡ ಮುಂಬರುವ ಬೆಳಗಾವಿ ಸ್ಥಳೀಯ ಸಂಸ್ಥೆ ಚುನಾವಣೆ ಅಂದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ತೀವ್ರ ಸೆಣಸಾಟ ನಡೆಸಲಿದ್ದಾರೆ.

ಲಖನ್ ಜಾರಕಿಹೊಳಿ ಇಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ನಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸೋದರ ಚನ್ನರಾಜ್ ಹಟ್ಟಿಹೊಳಿ, ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯ ಮಹಂತೇಶ್ ಕಾವಟಗಿಮಠ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡಲಾಗಿದೆ.

ಮತದಾರರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರಾಗಿದ್ದಾರೆ (8,875 ರಲ್ಲಿ 4,628 ಮಹಿಳಾ ಮತದಾರರು), ಮಹಿಳಾ ಮತದಾರರನ್ನು ಸೆಳೆಯಲು ಎಲ್‌ಪಿಜಿ ಸ್ಟೌವ್‌, ಇಸ್ತ್ರಿಪೆಟ್ಟಿಗೆಯಂತಹ ಗೃಹೋಪಯೋಗಿ ಉಪಕರಣಗಳನ್ನು ಈಗಾಗಲೇ ವಿತರಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಚುನಾವಣಾ ಪ್ರಚಾರ ರಂಗೇರುತ್ತಿದ್ದಂತೆ ನಗದು ಮತ್ತು ಚಿನ್ನ ಕೂಡ ಹಂಚುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಜಾರಕಿಹೊಳಿ ಸೋದರರು ಮತ್ತು ಹೆಬ್ಬಾಳ್ಕರ್ ಕುಟುಂಬ ನಡುವೆ ಕೆಲವು ವರ್ಷಗಳ ಹಿಂದೆ ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಹ ತೀವ್ರ ಪೈಪೋಟಿ ನಡೆದಿತ್ತು. ಈ ಬಾರಿ ಹೆಬ್ಬಾಳ್ಕರ್ ಸೋದರನನ್ನು ಪರಿಷತ್ ಚುನಾವಣೆಯಲ್ಲಿ ಸೋಲಿಸಲು ನಾಲ್ಕೂ ಮಂದಿ ಜಾರಕಿಹೊಳಿ ಸೋದರರು ಪಕ್ಷಬೇಧ ಮರೆತು ಒಂದಾಗಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಲಖನ್ ಜಾರಕಿಹೊಳಿ, ತಾವು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಬಿಜೆಪಿಗೆ ಕೂಡ ವರವಾಗಬಹುದು. ತಾವು ಬಿಜೆಪಿಯಿಂದ ಟಿಕೆಟ್ ಬಯಸಿರಲಿಲ್ಲ, ಸ್ವತಂತ್ರ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯುವುದು ಎಂದು ಬಹು ಹಿಂದೆಯೇ ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ. 

SCROLL FOR NEXT