ರಾಜಕೀಯ

ಅಕ್ಟೋಬರ್ 3ರಂದು ಬಿಜೆಪಿ ಕೋರ್ ಕಮಿಟಿ ಸಭೆ: ಉಪಚುನಾವಣೆ ಕುರಿತು ಚರ್ಚೆ

Manjula VN

ಬೆಂಗಳೂರು: ಅಕ್ಟೋಬರ್ 3ರಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಭಾನುವಾರ ಬೆಂಗಳೂರಿನಲ್ಲಿ ನಡೆಯಲಿದ್ದು, ಸಭೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಿಗೆ ಪಕ್ಷದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ. 

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಪಕ್ಷದ ಇತರೆ ಹಿರಿಯ ನಾಯಕರು ಭಾಗವಹಿಸಲಿದ್ದಾರೆಂದು ವರದಿಗಳು ತಿಳಿಸಿವೆ. 

ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದ ಬಳಿಕ ಮೊದಲ ಉಪ ಸಮರ ಈ ತಿಂಗಳು ನಡೆಯಲಿದೆ. ಹೀಗಾಗಿ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಅರುಣ್ ಸಿಂಗ್ ಅವರು ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದು, ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಉಪಚುನಾವಣೆ ನಡೆಯಲಿರುವ ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಹುತೇಕ ಅಖೈರುಗೊಳ್ಳುವ ಸಾಧ್ಯತೆಗಳಿವೆ. 

ಎರಡು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ಈಗಾಗಲೇ ಸ್ಥಳೀಯ ಜಿಲ್ಲಾಧ್ಯಕ್ಷ ಮತ್ತು ಮುಖಂಡರ ಅಭಿಪ್ರಾಯಗಳನ್ನು ಪಡೆದುಕೊಳ್ಳಲಾಗುತ್ತಿದ್ದು, ಭಾನುವಾರ ನಡೆಯುವ ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ.  ವೇಳೆ ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ವಿಸ್ತೃತವಾಗಿ ಚರ್ಚಿಸಿ ಬಳಿಕ ಕೆಲವರನ್ನು ಹೆಸರನ್ನು ಅಂತಿಮಗೊಳಿಸಲಾಗುತ್ತದೆ. 

ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಿದ ಹೆಸರಿನ ಪಟ್ಟಿಯನ್ನು ಅರುಣ್ ಸಿಂಗ್ ಅವರು ದೆಹಲಿಗೆ ಕೊಂಡೊಯ್ಯಲಿದ್ದಾರೆ. ಭಾನುವಾರ ರಾತ್ರಿಯೇ ಅರುಣ್ ಸಿಂಗ್ ಅವರು ದೆಹಲಿಗೆ ಮರಳಳಿದ್ದಾರೆ. 

ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಇತರರ ಜೊತೆ ಸಮಾಲೋಚನೆ ನಡೆಸಿ ಕಣಕ್ಕಿಳಿಸುವ ಅಭ್ಯರ್ಥಿಯ ಹೆಸರನ್ನು ವರಿಷ್ಠರು ಅಂತಿಮ ಮಾಡಲಿದ್ದಾರೆ. 

ಹಾನಗಲ್ ಮತ್ತು ಸಿಂದಗಿಯನ್ನು ಸುಲಭವಾದ ಕ್ಷೇತ್ರಗಳೆಂದು ಪರಿಗಣಿಸಬೇಡಿ. ರಾಜ್ಯದ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಈ ಚುನಾವಣೆ ಅತ್ಯಂತ ಮುಖ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ನಾಯಕರಿಗೆ ಹೇಳಿದ್ದರೆಂದು ತಿಳಿದುಬಂದಿದೆ. 

ಎರಡು ಕ್ಷೇತ್ರಗಳ ಉಪಚುನಾವಣೆಯ ಜೊತೆಗೆ ಎಂಎಲ್‌ಸಿ ಚುನಾವಣೆಗಳ ಬಗ್ಗೆಯೂ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಎಂಎಲ್‌ಸಿ ಚುನಾವಣೆಗೆ ಪಕ್ಷವು ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ ಎಂದು ತಿಳಿದುಬಂದಿದೆ. 

SCROLL FOR NEXT