ರಾಜಕೀಯ

"ರಾಷ್ಟ್ರ ರಾಜಕಾರಣದ ಬಗ್ಗೆ ಸಿದ್ದರಾಮಯ್ಯಗೆ ಪುಕ್ಕಲುತನವಿದೆ": ಎಚ್ ವಿಶ್ವನಾಥ್ ವ್ಯಂಗ್ಯ

Lingaraj Badiger

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣದ ಬಗ್ಗೆ ಪುಕ್ಕಲುತನವಿದೆ. ಆದ್ದರಿಂದಲೇ ರಾಷ್ಟ್ರ ಮಟ್ಟದ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಲು ಹಿಂಜರಿಯುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಸೋಮವಾರ ವ್ಯಂಗ್ಯವಾಡಿದ್ದಾರೆ.

ಇಂದು ಮೈಸೂರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ ದೇವೇಗೌಡ ಅವರು ದೇಶದ ಪ್ರಧಾನಿಯಾದರು. ಮೂರು ಬಾರಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರಧಾನಿಯಾದರು. ಪ್ರಧಾನಿ ಹುದ್ದೆ ಎನ್ನುವುದು ರಾಷ್ಟ್ರದ ಕಾರ್ಯಾಂಗದ ಅತ್ಯುನ್ನತ ಹುದ್ದೆ ಎಂದರು.

ಪ್ರಧಾನಿ ಅಭ್ಯರ್ಥಿ ಮಾಡುವುದಾದರೆ ರಾಷ್ಟ್ರ ರಾಜಕಾರಣಕ್ಕೆ ಬರುತ್ತೇನೆಂದು ಕಾಂಗ್ರೆಸ್ ವರಿಷ್ಠರಿಗೆ ಸಿದ್ದರಾಮಯ್ಯ ಹೇಳಬೇಕಿತ್ತು. ಹೇಳಲಿಲ್ಲ. ದೇವೇಗೌಡರು, ನರೇಂದ್ರ ಮೋದಿ ಪ್ರದರ್ಶಿಸಿದ ಧೈರ್ಯ ಸಿದ್ದರಾಮಯ್ಯ ಅವರಿಗೆ ಇಲ್ಲ. ಮತ್ತೇಕೆ  ಪ್ರಧಾನಿ ಮೋದಿ ಅವರ ವಿರುದ್ಧ ಟೀಕೆ ಮಾಡಬೇಕು ಎಂದು ಪ್ರಶ್ನಿಸಿದರು.

ದೇವೇಗೌಡರು ಪ್ರಧಾನಿಮಂತ್ರಿಯಾದ ಸಂದರ್ಭದಲ್ಲಿ ತಾನು ಕಾಂಗ್ರೆಸ್ ಪಕ್ಷದಲ್ಲಿದ್ದೆ. ಆದರೂ ಕನ್ನಡಿಗರೊಬ್ಬರು ಪ್ರಧಾನಿಯಾದರು ಎಂದು ಎಲ್ಲರಿಗೂ ಸಿಹಿ ಹಂಚಿದ್ದೆ. ಇದರಲ್ಲಿ ಅಸೂಯೆ ಪಡುವಂಥದ್ದು ಇಲ್ಲ. ಕನ್ನಡಿಗರು ಪ್ರಧಾನಿಯಾಗೋದು ಹೆಮ್ಮೆಯ ವಿಚಾರ ಎಂದು ಸ್ಮರಿಸಿದರು.

ಸಿದ್ದರಾಮಯ್ಯ ಭ್ರಷ್ಟಾಚಾರದ ವಿರುದ್ಧ ಮಾತನಾಡುವುದರಲ್ಲಿ ಅರ್ಥವಿಲ್ಲ. ಇವರು ಮುಖ್ಯಮಂತ್ರಿಯಾಗಿದ್ದಾಗ 326 ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಅವರ ಸಚಿವ ಸಂಪುಟ ಆ ವಿಚಾರವನ್ನೇ ತಳ್ಳಿಹಾಕಿತು. ಈಗ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ನೀವು ಯಾರ ಪರ ಇದ್ದೀರಿ ಅಂತ ಸ್ಪಷ್ಟವಾಗಿ ಹೇಳಿ ಎಂದು ಒತ್ತಾಯಿಸಿದರು.

SCROLL FOR NEXT