ರಾಜಕೀಯ

ಜೆಡಿಎಸ್'ಗೆ ಮತ ಹಾಕದಿರಿ: ಅಲ್ಪಸಂಖ್ಯಾತ ಸಮುದಾಯಕ್ಕೆ ಸಿದ್ದರಾಮಯ್ಯ

Manjula VN

ವಿಜಯಪುರ: ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ಜೆಡಿಎಸ್'ಗೆ ಮತಗಳನ್ನು ಹಾಕದಿರಿ, ಸ್ಥಳೀಯ ಪಕ್ಷಕ್ಕೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ ಸಮುದಾಯಕ್ಕೆ ಮಂಗಳವಾರ ಹೇಳಿದ್ದಾರೆ. 

ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಸಹಾಯ ಮಾಡುವ ಸಲುವಾಗಿ ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಗೆಲ್ಲುವ ಉದ್ದೇಶದಿಂದ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿಲ್ಲ. ಬಿಜೆಪಿಗೆ ಸಹಾಯ ಮಾಡುವ ಸಲುವಾಗಿ ನಿಲ್ಲಿಸಿದೆ. ಇದನ್ನು ನಾನು ಹೇಳುತ್ತಿಲ್ಲ, ಜನರೇ ಹೇಳುತ್ತಿದ್ದಾರೆಂದು ಹೇಳಿದ್ದಾರೆ. 

ಜೆಡಿಎಸ್ ಯಾವಾಗಲೂ ಕಾಂಗ್ರೆಸ್ ಪಕ್ಷವನ್ನು ಗುರಿ ಮಾಡುತ್ತಿದೆ. ಬಸವಕಲ್ಯಾಣ ಉಪಚುನಾವಣೆ ಸಂದರ್ಭದಲ್ಲಿಯೂ ಮುಸ್ಲಿಂ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಈ ವೇಳೆ ಅವರಿಗೆ 8,000 ಮತಗಳು ಸಿಕ್ಕಿತ್ತು. ಇದರಿಂದ ಕಾಂಗ್ರೆಸ್ ಸೋಲು ಕಾಣುವಂತಾಗಿತ್ತು. ಕಾಂಗ್ರೆಸ್'ನ್ನು ಸೋಲಿಸುವುದೇ ಅವರ ಉದ್ದೇಶವಾಗಿದೆ. ಆದರೆ, ಜನರು ಕಿವುಡರಲ್ಲ, ಅವರಿಗೆ ಎಲ್ಲವೂ ತಿಳಿದಿದೆ. ಅಲ್ಪ ಸಂಖ್ಯಾತ ಸಮುದಾಯದ ಜನರಿಗೆ ತಿಳಿದಿದೆ. ಜೆಡಿಎಸ್ ಉದ್ದೇಶ ಅವರಿಗೆ ಅರ್ಥವಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯದ ಮತದಾರರು ಜೆಡಿಎಸ್'ಗೆ ಮತಹಾಕದಂತೆ ವಿನಂತಿಸಿಕೊಳ್ಳುತ್ತಿದ್ದೇನೆ. ಜೆಡಿಎಸ್'ಗೆ ಮತ ಹಾಕಿದರೆ, ಬಿಜೆಪಿಗೆ ಮತ ಹಾಕಿದಂತೆ. ಹೀಗಾಗಿ ಜೆಡಿಎಸ್'ಗೆ ಮತ ಹಾಕದಿರಿ ಎಂದು ಹೇಳಿದ್ದಾರೆ. 

ಸಿಂದಗಿಯಲ್ಲಿ 33 ವರ್ಷದ ಸ್ನಾತಕೋತ್ತರ ಪದವೀಧರ ನಾಜಿಯಾ ಶಕೀಲ್ ಅಹ್ಮದ್ ಅಂಗಡಿ ಮತ್ತು 35 ವರ್ಷದ ಬಿಇ, ಎಮ್‌ಟೆಕ್ (ಸಿಎಸ್‌ಇ) ಪದವೀಧರ ನಿಯಾಜ್ ಶೇಖ್ ಅವರನ್ನು ಹಾನಗಲ್ ನಲ್ಲಿ ಜೆಡಿಎಸ್ ಕಣಕ್ಕಿಳಿಸಿದೆ.

SCROLL FOR NEXT