ರಾಜಕೀಯ

ಮೈಶುಗರ್ ಕಾರ್ಖಾನೆ ಪುನರುಜ್ಜೀವನ: ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆಗೆ ವರದಾನ!

Shilpa D

ಬೆಂಗಳೂರು: ಮೈಶುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣ ವಿಷಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾಣ್ಮೆಯ ಹೆಜ್ಜೆಯಿಟ್ಟಿದ್ದಾರೆ.

ಸದ್ಯಕ್ಕೆ ಮೈಶುಗರ್ ಕಾರ್ಖಾನೆ ಖಾಸಗೀಕರಣ ಸದ್ಯಕ್ಕಿಲ್ಲ ಎಂದು ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸಭೆಯ ನಂತರ ಮೈಶುಗರ್ ಕಾರ್ಖಾನೆ ಖಾಸಗೀಕರಣ ಪ್ರಸ್ತಾಪವಿಲ್ಲ ಎಂದು ಹೇಳಿದರು. ಬಸವರಾಜ ಬೊಮ್ಮಾಯಿ ಅವರ ನಿರ್ಧಾರಕ್ಕೆ ರೈತ ಸಂಘಟನೆಗಳು ಹರ್ಷ ವ್ಯಕ್ತ ಪಡಿಸಿದವು.

ಶತಮಾನದಷ್ಟು ಹಳೇಯದಾದ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಬೇಕೆಂದು ಒತ್ತಾಯಿಸಿ ರೈತ ಪರ ಸಂಘಟನೆಗಳು ಕಳೆದ 36 ದಿನಗಳಿಂದ ನಡೆಸುತ್ತಿದ್ದ ಹೋರಾಟವನ್ನು ನಿಲ್ಲಿಸಿದ್ದಾರೆ.

ಕಾರ್ಖಾನೆಯನ್ನು ಸರ್ಕಾರದಿಂದ ಪುನಶ್ಚೇತನಗೊಳಿಸಲಾಗುವುದು ಎಂದು ಘೋಷಿಸುವ ಮೂಲಕ ಮುಖ್ಯಮಂತ್ರಿ ಮಂಡ್ಯದ ಘನತೆಯನ್ನು ಎತ್ತಿಹಿಡಿದಿದ್ದಾರೆ ಎಂದು ಧರಣಿಯ ಭಾಗವಾಗಿದ್ದ ರೈತ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಸುನಂದಾ ಜಯರಾಮ್ ಹೇಳಿದ್ದಾರೆ.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಶಾಸಕರಾದ ಸಿ ಎಸ್ ಪುಟ್ಟರಾಜು ಮತ್ತು ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ರೈತ ಸಂಘದ ಮುಖಂಡರು ಮತ್ತು ಜನಪ್ರತಿನಿಧಿಗಳು ಸೇರಿದಂತೆ ಮಧ್ಯಸ್ಥಗಾರರ ಜೊತೆ ಸಿಎಂ ಸಭೆ ನಡೆಸಿದ್ದರು.

ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಜುಲೈ ಆರಂಭದಲ್ಲಿ ಮಂಡ್ಯದ ಶಾಸಕರ ನಿಯೋಗದೊಂದಿಗೆ ತೆರಳಿ ಕಾರ್ಖಾನೆಯ ಪುನರುಜ್ಜೀವನಕ್ಕಾಗಿ ಮನವಿ ಮಾಡಿದರು. ವಾಸ್ತವವಾಗಿ, ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಅವರು ಕೆಲವು ಅನುದಾನಗಳೊಂದಿಗೆ ಘಟಕವನ್ನು ಪುನರುಜ್ಜೀವನಗೊಳಿಸುವ ಯೋಜನೆಯನ್ನು ಹೊಂದಿದ್ದರು, ಆದರೆ ಆ ಹೊತ್ತಿಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕುಸಿದಿದ್ದರಿಂದ ಸಾಧ್ಯವಾಗಲಿಲ್ಲ.

ಯಡಿಯೂರಪ್ಪನವರ ಆಡಳಿತಾವಧಿಯಲ್ಲಿ ಸುಮಲತಾ ಘಟಕವನ್ನು ಖಾಸಗೀಕರಣಗೊಳಿಸುವ ಪರವಾಗಿದ್ದರು ಎಂದು ವರದಿಯಾಗಿತ್ತು.  ಕುಮಾರಸ್ವಾಮಿ ಅವರು ರೈತರ ಹಿತಾಸಕ್ತಿಗೆ ವಿರುದ್ಧವಾಗಿದ್ದಾರೆ ಎಂದು ಆರೋಪಿಸಿ ವಾಗ್ದಾಳಿ ನಡೆಸಿದ್ದರು. ಆದರೆ ಸರ್ಕಾರದಿಂದ ಅಥವಾ ಖಾಸಗಿ ಸಂಸ್ಥೆಗಳಿಂದ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕೆಂದು ಅವರು ಬಯಸಿದ್ದರು, ಅದು ರೈತರಿಗೆ ಸಹಾಯ ಮಾಡುತ್ತದೆ ಎಂಬುದು ಅವರ ವಾದವಾಗಿತ್ತು.

ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ, ಸಿದ್ದರಾಮಯ್ಯ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. 2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸುವುದಾಗಿ ರೈತರಿಗೆ ಭರವಸೆ ನೀಡಿದ್ದರು. ಆದರೆ ಬೊಮ್ಮಾಯಿ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸುವ ನಿರ್ಧಾರವು ಕಷ್ಟಕರವಾದ ಕೆಲಸವಾಗಿದ್ದರೂ, ಸದ್ಯ ಅದನ್ನು ಘೋಷಿಸಿದ್ದಾರೆ.

ಈ ಹಿಂದೆ ಸಿಎಂ ಪಟ್ಟ ಅಲಂಕರಿಸಿದ್ದವರೂ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಮಾತನಾಡಿರಲಿಲ್ಲ, ಆದರೆ ರೈತ ಮುಖಂಡರನ್ನು ಆಹ್ವಾನಿಸಿದ್ದ ಬೊಮ್ಮಾಯಿ ಅವರಿಗೆ ಭರವಸೆ ನೀಡಿದ್ದಾರೆ. ಜೊತೆಗೆ ಖಾಸಗೀಕರಣ ಸದ್ಯಕ್ಕಿಲ್ಲ ಎಂದು ಹೇಳಿದ್ದಾರೆ.

ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಿದರೆ, ಈ ಪ್ರದೇಶದ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ, ವಿಶೇಷವಾಗಿ ಹಳೆಯ ಮೈಸೂರು ಪ್ರದೇಶದಲ್ಲಿ ತನ್ನ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಸಹಾಯವಾಗಲಿದೆ, ಜೆಡಿಎಸ್ ಕೂಡ ತನ್ನ ನೆಲೆಯನ್ನು ಉಳಿಸಿಕೊಳ್ಳಲು ಹವಣಿಸುತ್ತಿದೆ. 

SCROLL FOR NEXT