ರಾಜಕೀಯ

ಬಿಜೆಪಿ-ಜೆಡಿಎಸ್ ಗೆ ನನ್ನನ್ನು ಕಂಡರೆ ಭಯ, ರಾಜಕೀಯವಾಗಿ ಮುಗಿಸಲು ನನ್ನ ವಿರುದ್ಧ ಪಿತೂರಿ: ಸಿದ್ದರಾಮಯ್ಯ

Shilpa D

ವಿಜಯಪುರ: ಬಿಜೆಪಿ ಮೀಸಲಾತಿ ವಿರೋಧಿ, ಯಾವತ್ತೂ ಸಂವಿಧಾನದ  ಮೇಲೆ ನಂಬಿಕೆ ಇಟ್ಟಿಲ್ಲ ಎಂದು ಭಾರತೀಯ ಜನತಾ ಪಕ್ಷದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿ ಹಿಂದುಳಿದ ವರ್ಗಗಳಿಗೆ ಯಾವತ್ತೂ ಆದ್ಯತೆ ನೀಡಿಲ್ಲ,  ಆದರೆ ಕಾಂಗ್ರೆಸ್ ಎಲ್ಲರನ್ನೂ ಸಮಾನವಾಗಿ ನೋಡುತ್ತದೆ. ಸಂವಿಧಾನದ ದೃಷ್ಟಿಯಲ್ಲಿ ಎಲ್ಲರೂ ಸಮಾನ ಎಂದು ಕಾಂಗ್ರೆಸ್ ಭಾವಿಸುತ್ತದೆ ಎಂದು ಹೇಳಿದ್ದಾರೆ. 

ಸಿಂದಗಿ, ಹಾನಗಲ್ ಉಪಚುನಾವಣೆ ಪ್ರಚಾರಕ್ಕೆ ಇನ್ನೂ ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ, ಮಾಜಿ ಸಿಎಂ ಸಿದ್ದರಾಮಯ್ಯ ಸಿಂದಗಿಯಲ್ಲಿ ವಿವಿಧ ಸಮುದಾಯಗಳ ಜನರ ಜೊತೆ ಸಭೆ ನಡೆಸಿದರು,  ಅವರು ಈಗಾಗಲೇ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೆಲವು ವಿಭಾಗಗಳ ಸದಸ್ಯರೊಂದಿಗೆ ಸಭೆಗಳನ್ನು ನಡೆಸಿದ್ದಾರೆ.

ಸೋಮವಾರ ಬಂಜಾರ ಸಮಾಜದ ಜನರನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಶೋಷಿತರು ಒಗ್ಗೂಡಿ ತಮ್ಮ ಅಹವಾಲುಗಳನ್ನು ಸಮಾವೇಶದಲ್ಲಿ ಹೇಳಿಕೊಂಡರೆ ತಪ್ಪೇನಿಲ್ಲ. ಇದು ಜಾತೀಯತೆ ಅಲ್ಲ. ಅಂತಹ ಸಮ್ಮೇಳನಗಳಲ್ಲಿ ಭಾಗವಹಿಸುವುದರಿಂದ ಒಬ್ಬ ಜಾತಿವಾದಿಯಾಗುವುದಾದರೆ, ನಾನು ಜಾತಿವಾದಿ ಎಂದಿದ್ದಾರೆ.

ನಮ್ಮ ಸರ್ಕಾರ ಬಂಜಾರ ಸಮಾಜದ ಅಭಿವೃದ್ಧಿಗೆ ವಾರ್ಷಿಕ 200 ಕೋಟಿ ರೂಪಾಯಿಗಳನ್ನು ನೀಡಿತ್ತು. ರಾಜ್ಯ ಬಿಜೆಪಿ ಸರ್ಕಾರ ಸರ್ಕಾರ ಈ ಅನುದಾನವನ್ನು ಬರೀ 10 ಕೋಟಿಗೆ ಇಳಿಸಿದೆ. ಸರ್ಕಾರವೇ ಸಂತ ಸೇವಾಲಾಲ್ ಜಯಂತಿಯನ್ನು  ಆಚರಿಸಬೇಕೆಂದು ಆದೇಶ ಹೊರಡಿಸಿದವನು ನಾನೆ.  ತಾಂಡಾಗಳು, ಹಟ್ಟಿಗಳು, ಮಜರೆಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕ್ರಾಂತಿಕಾರಕ "ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯಿದೆ" ಯನ್ನು ಜಾರಿಗೊಳಿಸಿ, ಲಕ್ಷಾಂತರ ಬಡ ಜನರಿಗೆ ಭೂಮಿಯ ಒಡೆತನದ ಹಕ್ಕು ನೀಡಿದ್ದು ನಮ್ಮ ಸರ್ಕಾರ.  ಇದು ಜಾತಿವಾದವೇ ಎಂದು ಪ್ರಶ್ನಿಸಿದ್ದಾರೆ. 

ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಬಂಜಾರ ಸಮುದಾಯದ ಕುಲಕಸುಬಾದ ಕಸೂತಿ ವೃತ್ತಿಯನ್ನು ಅಭಿವೃದ್ಧಿ ಪಡಿಸಲು 100 ಕೋಟಿ ರೂಪಾಯಿ ಅನುದಾನ ನೀಡುತ್ತೇವೆ ಮತ್ತು ಕಸೂತಿ ಉತ್ಪನ್ನಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸುತ್ತೇವೆ, ಬಿಜೆಪಿಗೆ ತಾಕತ್ತಿದ್ದರೆ ವಿರೋಧಿಸಲಿ ಎಂದು ಸವಾಲು ಹಾಕಿದ್ದಾರೆ.

ಜೆಡಿಎಸ್​ಗೂ ನಾನೇ ಟಾರ್ಗೆಟ್, ಬಿಜೆಪಿಗೂ ನಾನೇ ಟಾರ್ಗೆಟ್. ಏಕೆಂದರೆ ಇಬ್ಬರಿಗೂ ನನ್ನನ್ನು ಕಂಡರೆ ಭಯವಾಗುತ್ತದೆ. ಹೀಗಾಗಿ ನನ್ನನ್ನು ರಾಜಕೀಯವಾಗಿ ಮುಗಿಸಲು ತಂತ್ರ ರೂಪಿಸುತ್ತಿದ್ದಾರ, ಆದರೆ ಜನತೆ ನನ್ನೊಂದಿಗಿದ್ದಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. 

SCROLL FOR NEXT