ರಾಜಕೀಯ

'ಸಮ್ಮಿಶ್ರ ಸರ್ಕಾರ ಕೆಡವಲು ಅವರಿಗೂ ಇಷ್ಟವಿತ್ತು: ಜೆಡಿಎಸ್ ತೊರೆದು ಬಿಜೆಪಿ ಸೇರಲು ಜಮೀರ್ ಸಲಹೆ ನೀಡಿದರು'

Shilpa D

ಹಾಸನ: ನಾನು ಮತ್ತು ಶಾಸಕ ಜಮೀರ್ ಅಹಮ್ಮದ್ ಖಾನ್‌ ಒಳ್ಳೆ ಸ್ನೇಹಿತರು. 'ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಏನೂ ಕೆಲಸ ಆಗುತ್ತಿಲ್ಲ.,ನೀವು ಬಿಜೆಪಿಗೆ ಹೋಗಿ' ಎಂದು ಹೇಳಿದ್ದೇ ಜಮೀರ್. ಅದರಲ್ಲಿ ಸುಳ್ಳೇನು ಇಲ್ಲ ಎಂದು ಅಬಕಾರಿ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಕೆಲಸಗಳು ಸರಿಯಾಗಿ ಆಗುತ್ತಿರಲಿಲ್ಲ. ಹಾಗಾಗಿ ಸರ್ಕಾರ ಕೆಡವಲು ಜಮೀರ್‌ಗೂ ಇಷ್ಟವಿತ್ತು. ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಹೇಳಿ ನನ್ನನ್ನು ಬಿಜೆಪಿಗೆ ಹೋಗುವಂತೆ ಹೇಳಿದರು. ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಯಾರೇ ಬಂದರೂ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಹೈಕಮಾಂಡ್‌ ತೀರ್ಮಾನ ಕೈಗೊಳ್ಳಲಿದೆ’ ಎಂದು  ತಿಳಿಸಿದರು.

‘ಯಾವುದೇ ವಿಚಾರವಾಗಿ ರಾಜಕೀಯ ನಾಯಕರು ಎಚ್ಚರಿಕೆಯಿಂದ ಮಾತನಾಡಬೇಕು. ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ನಾಯಕರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ರಾಜ್ಯದ ಜನ ಗಮನಿಸುತ್ತಿರುತ್ತಾರೆ. ಈ ವಿಚಾರದಲ್ಲಿ ಜಮೀರ್‌ ಅವರ ಪದ ಬಳಕೆಯನ್ನು ಖಂಡಿಸುತ್ತೇನೆ’ ಎಂದರು.

‘ಕೊಟ್ಟ ಮಾತಿನಂತೆ ಬಿಜೆಪಿ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ನೀಡಲಾಗಿದೆ. ಕ್ಷೇತ್ರದ ಜನರಿಗೆ ಒಳ್ಳೆಯ ಕೆಲಸ ಮಾಡಿದ್ದೇನೆ. ಮುಂದೆಯೂ ಪಕ್ಷ ಟಿಕೆಟ್‌ ನೀಡಲಿದೆ. ಎಲ್ಲವೂ ಸಿಕ್ಕಿದೆ. ಬೇರೆ ಪಕ್ಷಕ್ಕೆ ಹೋಗಿ ಏನು ಮಾಡಲಿ? ನಾನು ಬಿಜೆಪಿಯಲ್ಲೇ ಇರುತ್ತೇನೆ ಮತ್ತು ನನ್ನ ಮಕ್ಕಳಿಗೂ ಹೇಳುತ್ತೇನೆ. ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್‌ ತೀರ್ಮಾನ ಕೈಗೊಳ್ಳಲಿದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

SCROLL FOR NEXT