ಬೆಳಗಾವಿ: ಪ್ರತಿಷ್ಠಿತ ಹಾನಗಲ್-ಸಿಂದಗಿ ಉಪ ಚುನಾವಣೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಸಿಂದಗಿ ಮತ್ತು ಹಾನಗಲ್ ನಲ್ಲಿ ಬಿಜೆಪಿಯ ಘಟಾನುಘಟಿ ನಾಯಕರುಗಳು ಅಂತಿಮ ಗಳಿಗೆಯವರೆಗೂ ಪ್ರಚಾರದಲ್ಲಿ ಪಾಲ್ಗೋಂಡಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮತದಾರರನ್ನು ಓಲೈಸುವ ಪ್ರಯತ್ನದಲ್ಲಿ ಅಂತಿಮ ಸುತ್ತಿನ ಪ್ರಚಾರದ ಕಸರತ್ತು ನಡೆಸಿದರು.
ಸಿಂದಗಿ ಸುತ್ತ ಮುತ್ತಲಿನ ಇತ್ತೀಚಿನ ಟ್ರೆಂಡ್ ನೋಡಿದರೇ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸಂಭವನೀಯ ಮತಗಳ ವಿಭಜನೆಯಿಂದ ಕೇಸರಿ ಪಕ್ಷವು ಲಾಭ ಪಡೆಯುವ ಸಾಧ್ಯತೆಯಿದೆ. ಆದರೆ ಕಾಂಗ್ರೆಸ್ ನಾಯಕರು ಬಿಜೆಪಿಯೊಂದಿಗೆ ತಮ್ಮ ನೇರ ಹೋರಾಟ, ಜೆಡಿಎಸ್ ಲೆಕ್ಕಕ್ಕಿಲ್ಲ ಎಂದು ಕೈ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.
ಯಡಿಯೂರಪ್ಪ ಅವರನ್ನು ಬಗಲಿಗೆ ಸರಿಸಿರುವ ಬಿಜೆಪಿ, ಮುಂಬರುವ ವಿಧಾನಸಭೆ ಚುನಾವಣೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಸಲು ಬಿಜೆಪಿ ನಿರ್ಧರಿಸಿದೆ.
ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಅಡುಗೆ ಅನಿಲ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕತ್ವವು ಸಿಂದಗಿಯಲ್ಲಿ ಪಕ್ಷಕ್ಕೆ ಕನಿಷ್ಠ 15,000 ಮತಗಳಿಂದ ಜಯಗಳಿಸಲಿದೆ ಎಂಬ ಆತ್ಮ ವಿಶ್ವಾಸದಲ್ಲಿದೆ.
ಇದನ್ನೂ ಓದಿ: ಆರ್ ಎಸ್ ಎಸ್ ಬಗ್ಗೆ ಕುಮಾರಸ್ವಾಮಿಯವರು ಪದೇಪದೇ ಮಾತನಾಡುವುದು ಯಾರನ್ನು ಮೆಚ್ಚಿಸೋಕೆ: ಸಿಎಂ ಬೊಮ್ಮಾಯಿ ಪ್ರಶ್ನೆ
ಸಿಂದಗಿಯಲ್ಲಿ ಜೆಡಿಎಸ್ ನಮ್ಮ ಮತಗಳನ್ನು ವಿಭಜಿಸುತ್ತದೆ ಇದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರ ಸುಳ್ಳು. ಬೆಲೆ ಏರಿಕೆ ಮತ್ತು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯದಿಂದ ದೇಶಾದ್ಯಂತ ಜನರು ಬಿಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ ಹೇಳಿದ್ದಾರೆ.
ಪ್ರಬಲ ಲಿಂಗಾಯತ ಸಮುದಾಯವಾಗಲಿ ಅಥವಾ ಹಿಂದುಳಿದ ಸಮುದಾಯಗಳಾಗಲಿ ಎಲ್ಲಾ ವರ್ಗದ ಜನರು ಒಗ್ಗೂಡಿ ಸಿಂದಗಿಯಲ್ಲಿ ಕಾಂಗ್ರೆಸ್ ಸ್ಥಾನ ಭದ್ರವಾಗಿದೆ ಎಂದು ಹೇಳಿದರು. ಯಡಿಯೂರಪ್ಪ ಅವರನ್ನು ಲಿಂಗಾಯತರ ಧೀಮಂತ ನಾಯಕ ಎಂದು ಕರೆದ ಪಾಟೀಲ್, ಬಿಜೆಪಿ ಸರ್ಕಾರದ ವೈಫಲ್ಯದಿಂದ ಸಮುದಾಯದ ಮತದಾರರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬಿಜೆಪಿಯವರು ಮತದಾರರಿಗೆ ಹಣ ಹಂಚುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ಒಂದೇ ಕ್ಷೇತ್ರದಲ್ಲಿ 10-12 ಸಚಿವರು ಬೀಡು ಬಿಟ್ಟಿದ್ದು, ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಲಿದೆ ಎಂದು ಹೇಳಿದ ಅವರು ಹಾನಗಲ್ ಮತ್ತು ಸಿಂದಗಿಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಸಿಂದಗಿ ಮತ್ತು ಹಾನಗಲ್‌ನಲ್ಲಿ ಪ್ರಚಾರಕ್ಕೆ ಬೊಮ್ಮಾಯಿ ಮತ್ತು ಯಡಿಯೂರಪ್ಪ ನೇತೃತ್ವದ ಹೆಚ್ಚಿನ ನಾಯಕರು ಮತ್ತು ಮಂತ್ರಿಗಳ ಪ್ರಚಾರದಿಂದಾಗಿ ಬಿಜೆಪಿ, ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ ಎಂದು ಬೊಮ್ಮಾಯಿ ಹೇಳಿದರೆ, ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಬೇಸತ್ತಿರುವುದರಿಂದ ಬಿಜೆಪಿಗೆ ಸೋಲು ಖಚಿತ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಭವಿಷ್ಯ ನುಡಿದಿದ್ದರೂ, ಬಿಜೆಪಿ ನಾಯಕರು ಪಕ್ಷಕ್ಕೆ ಸ್ಪಷ್ಟವಾದ ಗೆಲುವು ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.