ರಾಜಕೀಯ

'ಮಾರ್ಗದರ್ಶಕ' ಬಿ.ಎಸ್. ಯಡಿಯೂರಪ್ಪ ಭೇಟಿ ಮಾಡಿದ ಸಿಎಂ ಬೊಮ್ಮಾಯಿ, ರಾಜಕೀಯ ವಲಯದಲ್ಲಿ ಕುತೂಹಲ!

Sumana Upadhyaya

ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿದ ನಂತರ ಬಿಜೆಪಿಯೊಳಗೆ ಕೆಲವು ನಾಯಕರಿಗೆ ಇದು ಸರಿ ಬಂದಂತೆ ಕಾಣುತ್ತಿಲ್ಲ.

ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಹೈಕಮಾಂಡ್ ಸೂಚಿಸಿರುವುದು ಬಿಜೆಪಿಯೊಳಗೆ ಹಲವು ಹಿರಿಯ ನಾಯಕರಿಗೆ ಅಸಮಾಧಾನವನ್ನುಂಟುಮಾಡಿದ್ದು ಈ ಸಂದರ್ಭದಲ್ಲಿ ಬೊಮ್ಮಾಯಿಯವರು ತಮ್ಮ ಮಾರ್ಗದರ್ಶಕ, ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಗುರುಗಳಾದ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ.

ಇದೇ 13ಕ್ಕೆ ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದ್ದು ಈ ಸಂದರ್ಭದಲ್ಲಿ ಹಿರಿಯ ನಾಯಕ ಯಡಿಯೂರಪ್ಪನವರ ಜೊತೆ ಉತ್ತಮ ಬಾಂಧವ್ಯ ಹೊಂದಿರಲು, ಹಿಂದಿನ ಪ್ರೀತಿ, ವಿಶ್ವಾಸ-ಗೌರವವನ್ನೇ ಕಾಪಾಡಿಕೊಂಡು ಹೋಗಲು ಬಸವರಾಜ ಬೊಮ್ಮಾಯಿಯವರು ತಮ್ಮ ಈ ನಡೆಯನ್ನು ಪ್ರದರ್ಶಿಸುತ್ತಿದ್ದು ನಿನ್ನೆ ನಡೆದ ಭೇಟಿ ಮಾತುಕತೆ ಗೌಪ್ಯವಾಗಿತ್ತು ಎಂದು ಮೂಲಗಳು ಹೇಳುತ್ತಿವೆ. ವಿಧಾನಸಭೆಯಲ್ಲಿ ಯಡಿಯೂರಪ್ಪನವರ ಮುಂದೆ ಬಸವರಾಜ ಬೊಮ್ಮಾಯಿಯವರು ಹಿತಾಸಕ್ತಿ, ಉತ್ತಮ ನಡೆಯನ್ನು ಪ್ರದರ್ಶಿಸಬೇಕಿದೆ.

ಸದನದಲ್ಲಿ ಕಾಂಗ್ರೆಸ್ ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿ ಕೇಳಿಬಂದಿರುವ ಹಲವು ಹಗರಣಗಳನ್ನುಪ್ರಸ್ತಾಪಿಸಿ ಗದ್ದಲವೆಬ್ಬಿಸುವ ಸಾಧ್ಯತೆಯಿದ್ದು ಈ ಸಂದರ್ಭದಲ್ಲಿ ಬೊಮ್ಮಾಯಿಯವರಿಗೆ ಪಕ್ಷದ ಹಿರಿಯ-ಕಿರಿಯ ಶಾಸಕರ ಬೆಂಬಲ ಖಂಡಿತಾ ಬೇಕಿದೆ. ಈ ನಿಟ್ಟಿನಲ್ಲಿ ಬೊಮ್ಮಾಯಿಯವರು ಯಡಿಯೂರಪ್ಪನವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಿನ್ನೆ ಯಡಿಯೂರಪ್ಪನವರ ನಿವಾಸ ಕಾವೇರಿಗೆ ಸಿಎಂ ಬೊಮ್ಮಾಯಿಯವರು ಹೋಗಿ ಅಲ್ಲಿ 15 ನಿಮಿಷಗಳ ಸಮಯ ಕಳೆದಿದ್ದಾರೆ.

ಹಲವು ನಿಗಮ-ಮಂಡಳಿಗಳಿಗೆ ನೇಮಕಾತಿ ವಿಚಾರವೂ ನಿನ್ನೆಯ ಉಭಯ ನಾಯಕರ ಭೇಟಿಯಲ್ಲಿ ಚರ್ಚೆಯಾಗಿರಬಹುದು, ಯಡಿಯೂರಪ್ಪನವರ ಒಪ್ಪಿಗೆಯಿಲ್ಲದೆ ಸರ್ಕಾರದ ಪ್ರಮುಖ ನಿರ್ಧಾರಗಳನ್ನು ಬೊಮ್ಮಾಯಿಯವರು ಮುಂದುವರಿಸುವುದು ಕಷ್ಟವೇ, ಈ ನಿಟ್ಟಿನಲ್ಲಿ ಭೇಟಿ ಸಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 

SCROLL FOR NEXT