ರಾಜಕೀಯ

ಜೆಡಿಎಸ್ ಬೆಂಬಲದೊಂದಿಗೆ ಈ ಬಾರಿ ಕಲಬುರಗಿ ಪಾಲಿಕೆ ಅಧಿಕಾರ ನಮ್ಮ ಪಾಲಾಗಲಿದೆ: ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್

Manjula VN

ಕಲಬುರಗಿ: ಕಲಬುರಗಿಯಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಜೆಡಿಎಸ್ ಬೆಂಬಲ ನೀಡುತ್ತದೆ ಎಂಬ ವಿಶ್ವಾಸವಿದೆ. ಜೆಡಿಎಸ್​ ಜೊತೆ ಸೇರಿ ನಾವೇ ಈ ಬಾರಿ ಪಾಲಿಕೆಯ ಅಧಿಕಾರ ನಮ್ಮ ಪಾಲಾಗಲಿದೆ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿ ಹೊರಹೊಮ್ಮಿದೆ. ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ತಲಾ 10 ವಾರ್ಡ್​ಗಳನ್ನು ಗೆದ್ದಿವೆ, ಆದರೆ ನಾವು ಉತ್ತರ ಕ್ಷೇತ್ರದಲ್ಲಿ 17 ಸ್ಥಾನಗಳನ್ನ ಗೆದ್ದಿದ್ದೇವೆ. ಈ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಖಂಡಿತವಾಗಿಯೂ ಜಯ ತಂದಿದೆ. ಕಳೆದ ಬಾರಿಗಿಂತಲು ಈ ಬಾರಿ ನಾಲ್ಕು ಸ್ಥಾನವನ್ನು ನಾವು ಹೆಚ್ವಿಗೆ ಗೆದ್ದಿದ್ದೇವೆ. ಇನ್ನೂ ಎರಡ್ಮೂರು ವಾರ್ಡ್​ಗಳಲ್ಲಿ ಗೆಲ್ಲುತ್ತೇವೆ ಎಂಬ ನಿರೀಕ್ಷೆ ಇತ್ತು. ಆದರೆ 27 ಸ್ಥಾನದಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿದೆ ಎಂದು ಹೇಳಿದರು.

ಬಳಿಕ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್​ ಪಕ್ಷಕ್ಕೆ ಜೆಡಿಎಸ್ ಬೆಂಬಲ ನೀಡುತ್ತದೆ ಎಂಬ ವಿಶ್ವಾಸ ನನಗಿದೆ. ನಾವು ಕೂಡ ಸ್ಥಳೀಯ ಜೆಡಿಎಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದೇವೆ. ಅವರು ಕೂಡ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿದೆ, ಬಿಜೆಪಿ ಏನೇ ಕುತಂತ್ರ ಮಾಡಿದ್ರೂ ಮೇಯರ್ ಸ್ಥಾನ ಕಾಂಗ್ರೆಸ್ ಪಾಲಾಗುತ್ತೆ. ಈ ಬಗ್ಗೆ ನಮ್ಮ ನಾಯಕರು ಜೆಡಿಎಸ್ ರಾಜ್ಯ ಮಟ್ಟದ ನಾಯಕರ ಜೊತೆ ಸಹ ಮಾತುಕತೆ ನಡೆಸುತ್ತಿದ್ದಾರೆ. ಇಷ್ಟಾಗಿಯೂ ಜಾತ್ಯಾತೀತತೆ ಮುರಿದು ಜೆಡಿಎಸ್ ಬಿಜೆಪಿ ಜೊತೆ ಹೋದ್ರೆ ಹೋಗಲಿ ಎಂದು ತಿಳಿಸಿದ್ದಾರೆ.

SCROLL FOR NEXT