ರಾಜಕೀಯ

ಇಂದಿನಿಂದ ವಿಧಾನಮಂಡಲ ಅಧಿವೇಶನ: ಎತ್ತಿನ ಗಾಡಿಯಲ್ಲಿ ಕಲಾಪಕ್ಕೆ ಆಗಮಿಸಲಿರುವ ಕಾಂಗ್ರೆಸ್ ನಾಯಕರು!

Sumana Upadhyaya

ಬೆಂಗಳೂರು: 10 ದಿನಗಳ ವಿಧಾನಮಂಡಲ ಅಧಿವೇಶನ ಸೋಮವಾರ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಮುಖ್ಯವಾಗಿ ಪ್ರತಿಪಕ್ಷ ಕಾಂಗ್ರೆಸ್ ಸಜ್ಜುಗೊಳ್ಳುತ್ತಿದೆ.

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೋವಿಡ್ ನಿರ್ವಹಣೆ, ಲಸಿಕೆ ಪೂರೈಕೆಯಲ್ಲಿ ಕೊರತೆ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಇಕ್ಕಟ್ಟಿಗೆ ಸಿಲುಕಿಸಲು, ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ.

ಇನ್ನೊಂದೆಡೆ ಸರ್ಕಾರ, ಈ ಕಲಾಪದಲ್ಲಿ 18 ಮಸೂದೆಗಳ ಅಂಗೀಕಾರಕ್ಕೆ ಬಯಸುತ್ತಿದೆ. ಕರ್ನಾಟಕ ಪೊಲೀಸ್ ಕಾಯ್ದೆ 1963, ಆನ್ ಲೈನ್ ಜೂಜಾಟ ಸೇರಿದಂತೆ ಎಲ್ಲಾ ಪ್ರಮುಖ ತಿದ್ದುಪಡಿಗಳಿಗೆ ಬಯಸುತ್ತಿದೆ. ಅಧಿವೇಶನಕ್ಕೆ ಸಮಯ ಸಾಕಾಗುತ್ತದೆಯೇ ಎಂದು ಕೇಳಿದಾಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ಕಲಾಪದ ವೇಳೆ ಪ್ರತಿಪಕ್ಷಗಳು ಯಾವುದೇ ರೀತಿಯಲ್ಲಿ ಅಡ್ಡಿಪಡಿಸದೆ ಸುಗಮವಾಗಿ ಸಾಗಲು ತೋರಿದರೆ ಮತ್ತು ಸದನದಿಂದ ಹೊರಹೋಗದೆ ಸಹಕರಿಸಿದರೆ ಪ್ರಮುಖ ವಿಷಯಗಳನ್ನು ಚರ್ಚಿಸಲು 10 ದಿನಗಳ ಕಲಾಪ ಸಾಕಾಗುತ್ತದೆ ಎಂದರು.

ಅಧಿವೇಶನದ ಮೊದಲ ದಿನ, ಪ್ರತಿಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಇಂಧನ ಬೆಲೆಯ ಏರಿಕೆಯನ್ನು ಖಂಡಿಸಿ ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಬರಲು ಸಜ್ಜಾಗಿದ್ದಾರೆ. ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ  ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಗಳು ಮತ್ತು ಧಾರ್ಮಿಕ ವಿಷಯಗಳ ಕುರಿತು ಕರಾವಳಿ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹೆಚ್ಚಿಸಲು ಕ್ರಮ ಕೈಗೊಳ್ಳುವ ಅಗತ್ಯ ಕುರಿತು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲು ಡಿ ಕೆ ಶಿವಕುಮಾರ್ ಮುಂದಾಗಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧ: ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ ಅವರನ್ನು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಸಂದಿಗ್ಧತೆಗೆ ಸಿಲುಕಿಸಲು ಕಾಂಗ್ರೆಸ್ ಸಿದ್ದತೆ ನಡೆಸಿದೆ, ಸರ್ಕಾರ ಯಾರ ಜೊತೆಗೂ ಚರ್ಚಿಸದೆ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ತರಾತುರಿಯಲ್ಲಿ ತಂದಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ.

ಸಾರ್ವಜನಿಕ ಖಾತೆ ಸಮಿತಿಯ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಅವರು, ಮೃತರ ಸಂಬಂಧಿಕರಿಗೆ ಪರಿಹಾರ ನೀಡುವುದನ್ನು ತಪ್ಪಿಸಲು ಕೋವಿಡ್ ಸಾವಿನ ಅಂಕಿಅಂಶಗಳನ್ನು ಸರ್ಕಾರ ಮರೆಮಾಚಿದ್ದು  ಅದನ್ನು ಸದನದಲ್ಲಿ ಎತ್ತಿ ತೋರಿಸುತ್ತೇನೆ ಎಂದು ಆರೋಪಿಸಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯನ್ನು ಬೆಂಬಲಿಸಬೇಕೆ ಎಂದು ಇನ್ನೂ ತೀರ್ಮಾನಿಸಬೇಕಾದ ಜೆಡಿಎಸ್, ಅಧಿವೇಶನದಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಬೊಮ್ಮಾಯಿ ಅವರಿಗೆ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ಮೊದಲ ಅಧಿವೇಶನವಾಗಿದೆ. ಹಿಂದುಳಿದ ವರ್ಗಗಳ ಆಯೋಗ ನಡೆಸುವ ಜಾತಿ ಗಣತಿ, 2ಎ ಮಾನ್ಯತೆಗಾಗಿ ಪಂಚಮಶಾಲಿ-ಲಿಂಗಾಯತರ ಬೇಡಿಕೆ ಮತ್ತು ಇತರ ವಿರೋಧ ಪಕ್ಷಗಳ ಬೇಡಿಕೆಯನ್ನು ಸರ್ಕಾರ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ರಾಜಕೀಯ ವಲಯಗಳಲ್ಲಿ ಇದೆ.

ಅಧಿವೇಶನ ಹಿನ್ನೆಲೆಯಲ್ಲಿ ವಿಧಾನಸೌಧ ಆಸುಪಾಸಿನಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ. ಹೆಚ್ಚು ಜನ ಒಂದೇ ಕಡೆ ಸೇರುವಂತಿಲ್ಲ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ತಿಳಿಸಿದೆ.

SCROLL FOR NEXT