ರಾಜಕೀಯ

ಸಿದ್ದರಾಮಯ್ಯ ಅದ್ಧೂರಿ ಹುಟ್ಟುಹಬ್ಬದ ನಂತರ ಸರಳವಾಗಿ ಜನ್ಮದಿನ ಆಚರಿಸಿಕೊಂಡ ಜಿ ಪರಮೇಶ್ವರ್

Lingaraj Badiger

ತುಮಕೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅದ್ಧೂರಿ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಶನಿವಾರ ತಮ್ಮ 71ನೇ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡರು.

ಪರಮೇಶ್ವರ್ ಅವರ ಬೆಂಬಲಿಗರು ತಮ್ಮ ನಾಯಕನ ಹುಟ್ಟುಹಬ್ಬವನ್ನು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಆಚರಿಸಲು ಯೋಜಿಸಿದ್ದರು. ಆದರೆ ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾರಿ ಜನಸ್ತೋಮವನ್ನು ನೋಡಿದ ಪರಮೇಶ್ವರ ಅವರು ಸರಳವಾಗಿ ಆಚರಿಸುವತೆ ಸೂಚಿಸಿದ್ದರು. ಆದಾಗ್ಯೂ, ಭಾರೀ ಮಳೆಯಿಂದಾಗಿ ತನ್ನ ಮತದಾರರ ಸಂಕಷ್ಟವನ್ನು ಪರಿಗಣಿಸಿ ಮೆಗಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಪರಮೇಶ್ವರ್ ಅವರು ಹೆಗ್ಗೆರೆ ಸಮೀಪದ ಸಿದ್ಧಾರ್ಥ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ, ಸಿದ್ದರಾಮೋತ್ಸವ ಮಾದರಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಆಸಕ್ತಿ ಇಲ್ಲ. ಸಿದ್ದರಾಮಯ್ಯನವರಿಗೂ ಆಸಕ್ತಿ ಇರಲಿಲ್ಲ. ಆದರೆ ಅವರ ಅಭಿಮಾನಿಗಳು ಸೇರಿ ಅದ್ಧೂರಿಯಾಗಿ ಆಚರಿಸಿದ್ದಾರೆ ಎಂದರು.

ಸಿದ್ದರಾಮಯ್ಯ ಹುಟ್ಟುಹಬ್ಬದ ಕಾರ್ಯಕ್ರಮ ಕಾಂಗ್ರೆಸ್ ಅನ್ನು ಬಲವಾಗಿ ಸಂಘಟಿಸಲು ಸಹಾಯ ಮಾಡಿತು ಮತ್ತು ನಮಗೆ ಒಂದು ರೀತಿಯ ಬಲ ನೀಡಿತು. ಅದು ಕೇವಲ ಹುಟ್ಟುಹಬ್ಬದ ಸಂಭ್ರಮ ಮಾತ್ರವಲ್ಲ, ಬಿಜೆಪಿ ಸರ್ಕಾರದ ದುರಾಡಳಿತದ ನಂತರ 2023ರ ವಿಧಾನಸಭಾ ಚುನಾವಣೆಯಲ್ಲಿ ನಾವು ಮತ್ತೆ ಅಧಿಕಾರಕ್ಕೆ ಸಹಾಯ ಮಾಡುತ್ತದೆ ಎಂದು ಪರಮೇಶ್ವರ್ ಹೇಳಿದರು.

SCROLL FOR NEXT