ರಾಜಕೀಯ

'ಹರ್ ಘರ್ ತಿರಂಗ' ಅಭಿಯಾನ ರಾಜಕೀಯ ಕುತಂತ್ರ: ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ

Sumana Upadhyaya

ಹುಬ್ಬಳ್ಳಿ/ಬಾದಾಮಿ: ಕೇಂದ್ರ ಬಿಜೆಪಿ ಸರ್ಕಾರದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿನ ‘ಹರ್ ಘರ್ ತಿರಂಗ’ ಅಭಿಯಾನವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. 

ರಾಷ್ಟ್ರಧ್ವಜ ಅಭಿಯಾನಕ್ಕೂ ದೇಶಭಕ್ತಿಗೂ ಯಾವುದೇ ಸಂಬಂಧವಿಲ್ಲ. ಇದು ಬಿಜೆಪಿಯವರ ರಾಜಕೀಯ ಕುತಂತ್ರವಷ್ಟೆ ಎಂದಿದ್ದಾರೆ.

ಬಾದಾಮಿಗೆ ಹೊರಡುವ ಮುನ್ನ ಹುಬ್ಬಳ್ಳಿಯಲ್ಲಿ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯ ಮಾತೃಸಂಸ್ಥೆ ಆರ್‌ಎಸ್‌ಎಸ್ ಈ ಹಿಂದೆ ಸಂವಿಧಾನ ಮತ್ತು ರಾಷ್ಟ್ರಧ್ವಜವನ್ನು ವಿರೋಧಿಸುತ್ತಿತ್ತು. ನಾಗ್ಪುರದ ಪ್ರಧಾನ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ ಎಂದು ಆರೋಪಿಸಿದರು. ತಾವೇ ಸರಿಯಾಗಿ ತ್ರಿವರ್ಣ ಧ್ವಜದ ಪ್ರಾಮುಖ್ಯತೆ, ಇತಿಹಾಸವನ್ನು ಅರಿಯದವರು, ಗೌರವ ಕೊಡದವರು ಕಾಂಗ್ರೆಸ್ ಮತ್ತು ದೇಶಕ್ಕೆ ರಾಷ್ಟ್ರಧ್ವಜದ ಮಹತ್ವವನ್ನು ಹೇಗೆ ಕಲಿಸುತ್ತಾರೆ ಎಂದು ಪ್ರಶ್ನಿಸಿದರು. 

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹಿಂದೆ ಯಡಿಯೂರಪ್ಪನವರನ್ನು ಬದಲಾಯಿಸುವ ಬಗ್ಗೆ ನನಗೆ ಮಾಹಿತಿ ಸಿಕ್ಕಿತ್ತು. ಬಸವರಾಜ ಬೊಮ್ಮಾಯಿ ಅವರನ್ನು ಬದಲಾಯಿಸುವ ಬಗ್ಗೆ ನನಗೆ ಮಾಹಿತಿ ಬಂದಿಲ್ಲ. ಬಿಜೆಪಿಯಲ್ಲಿ ಮೂರನೇ ಮುಖ್ಯಮಂತ್ರಿಯಾದರೂ ಬರಲಿ, ನಾಲ್ಕನೇ ಮುಖ್ಯಮಂತ್ರಿಯಾದರೂ ಬರಲಿ ಅದು ಆ ಪಕ್ಷಕ್ಕೆ ಬಿಟ್ಟಿದ್ದು ಎಂದರು.

ಧ್ವಜ ಸಂಹಿತೆಗೆ ತಿದ್ದುಪಡಿ ತರುವ ಕೇಂದ್ರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ರಾಷ್ಟ್ರಧ್ವಜಕ್ಕೆ ಬಳಸುವ ಬಟ್ಟೆ ಹತ್ತಿ ಅಥವಾ ರೇಷ್ಮೆಯಾಗಿರಬೇಕು, ಆದರೆ ಹೊಸ ತಿದ್ದುಪಡಿಯಲ್ಲಿ ಪಾಲಿಯೆಸ್ಟರ್ ಬಳಕೆಗೆ ಅವಕಾಶ ನೀಡಲಾಗಿದೆ, ಇದು ಖಾದಿ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಅವಮಾನವಾಗಿದೆ ಎಂದು ಆರೋಪಿಸಿದರು. 

ಬಾದಾಮಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ಭಾರತಕ್ಕಾಗಿ ನಡಿಗೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತ್ರಿವರ್ಣ ಧ್ವಜವನ್ನು ವೀರ ಸಾವರ್ಕರ್ ವಿರೋಧಿಸಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ‘ಹರ್ ಘರ್ ತಿರಂಗ’ ಆರಂಭಿಸುವ ಮೂಲಕ ಸಾಹಸ ಮಾಡುತ್ತಿದ್ದಾರೆ. ಧ್ವಜ ಸಂಹಿತೆಯನ್ನು ತಿದ್ದುಪಡಿ ಮಾಡುವ ಮೂಲಕ ಬಿಜೆಪಿ ಸರ್ಕಾರವು ಭಾರತೀಯ ಸಂವಿಧಾನ ಮತ್ತು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದೆ.

ಬಿಜೆಪಿ ಒಡೆದು ಆಳುವ ತಂತ್ರದೊಂದಿಗೆ ಕೆಲಸ ಮಾಡುತ್ತಿದೆ ಎಂದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕೆಂದು ನೆರೆದಿದ್ದವರಲ್ಲಿ ಮನವಿ ಮಾಡಿಕೊಂಡರು.

SCROLL FOR NEXT