ರಾಜಕೀಯ

ಕಾಂಗ್ರೆಸ್ ಗೆ ಇಷ್ಟು ಬೇಗ ನೆಹರು ಮುಖ ಮರೆಯಿತೇ ಅಥವಾ ಇದು ಜಾಣ ಕುರುಡೋ?: ಬಿಜೆಪಿ ತಿರುಗೇಟು

Srinivasamurthy VN

ಬೆಂಗಳೂರು: ಸರ್ಕಾರಿ ಜಾಹಿರಾತಿನಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಚಿತ್ರ ಕೈ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಟೀಕೆಗಳಿಗೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಗೆ ಇಷ್ಟು ಬೇಗ ನೆಹರು ಮುಖ ಮರೆಯಿತೇ ಅಥವಾ ಇದು ಜಾಣ ಕುರುಡೋ? ಎಂದು ಕುಟುಕಿದೆ.

ಸರ್ಕಾರಿ ಜಾಹಿರಾತಿನಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಚಿತ್ರ ಕೈ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಕಾಂಗ್ರೆಸ್ ಕೂಡಲೇ ಸಿಎಂ ಬೊಮ್ಮಾಯಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ. ಅತ್ತ ಸಿದ್ದರಾಮಯ್ಯ ಅವರೂ ಕೂಡ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಜನರ ತೆರಿಗೆ ಹಣದಿಂದ ನೀಡಿರುವ ಜಾಹೀರಾತಿನಲ್ಲಿ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ನೆಹರೂ ಅವರಿಗೆ ಮಾಡಿರುವ ಅವಮಾನವನ್ನು ಸಹಿಸಲಾಗದು. ಈ ಅವಮಾನಕ್ಕಾಗಿ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ. 

ಅಂತೆಯೇ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳಿರುವ ಜಾಹೀರಾತಿನಲ್ಲಿ ಆರ್‌ಎಸ್‌ಎಸ್‌ ಸಂಸ್ಥಾಪಕ ಕೆ.ಬಿ.ಹೆಡಗೆವಾರ್‌ ಅವರ ಚಿತ್ರವನ್ನೂ ಏಕೆ ಕೈಬಿಟ್ಟಿದ್ದೀರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾಗಿ ಎರಡು ಬಾರಿ ಜೈಲುಶಿಕ್ಷೆ ಅನುಭವಿಸಿದ್ದ ಹೆಡಗೆವಾರ್ ಚಿತ್ರ ಕೈಬಿಡಲು ತ್ರಿವರ್ಣ ಧ್ವಜವನ್ನು ತಿರಸ್ಕರಿಸಿದ್ದ ಅವರ ಬಂಡವಾಳ ಬಯಲಾಗಬಹುದೆಂಬ ಭಯವೇ? ಎಂದು ಸಿಎಂ ಬೊಮ್ಮಾಯಿ ಅವರನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿರುವ ಬಿಜೆಪಿ, ತನ್ನದೇ ಜಾಹಿರಾತು ಮರು ಹಂಚಿಕೆ ಮಾಡಿಕೊಂಡಿದ್ದು, ಅದರೊಟ್ಟಿಗೆ, 'ಕಾಂಗ್ರೆಸ್ ಪಕ್ಷಕ್ಕೆ ತನ್ನ ಯಜಮಾನ ನೆಹರೂ ಅವರನ್ನು ಗುರುತಿಸಲಾಗದಷ್ಟು ಮಂಪರು ಕವಿದಿದೆಯೇ? ಕಾಂಗ್ರೆಸ್ ಇಷ್ಟು ಬೇಗ ನೆಹರು ಮುಖ ಮರೆಯಿತೇ ಅಥವಾ ಇದು ಜಾಣ ಕುರುಡೋ? ಎಂದು ಪ್ರಶ್ನಿಸಿದೆ.

ಸರ್ಕಾರಿ ಜಾಹಿರಾತಿನಲ್ಲಿ ನೆಹರೂ ಅವರ ಚಿತ್ರವಿದ್ದು, ಅದನ್ನು ಗುರುತಿಸಲಾಗದಷ್ಟರ ಮಟ್ಟಿಗೆ ಕಾಂಗ್ರೆಸ್ ಅವರನ್ನು ಮರೆತು ಹೋಗಿದೆ ಎಂದು ಟೀಕಿಸಿದೆ.
 

SCROLL FOR NEXT